Sunday, December 25, 2011

ಅವಳು..

ಅವಳು ಬರ್ತಾಳೆ ಅಂದ್ರೆ ಗೆಲ್ಲೋದು ಖಾತ್ರಿ ಇಲ್ಲದ ಪಂದ್ಯದಲ್ಲೂ ಭಾಗವಹಿಸೋ ಹುಚ್ಚು ಹುರುಪು.. ಅವಳು ಆ ಬಸ್ಸಿನಲ್ಲಿದ್ದಾಳೆ ಅಂದ್ರೆ ಆ ಬಸ್ಸು ಸಿಗದೆ ಇದ್ರೂ ಓಡಿ ಹೋಗಿ ಜೀವ ಪಣ ಇತ್ತು ಚಾಲಕನ ಹತ್ತಿರ ಉಗಿಸಿಕೊಂಡು ಬೆವರಿಸಿಕೊಂಡು ಅವಳ ಪಕ್ಕಾ ನಿಲ್ಲುವ ತವಕ.. ಅವಳು ಶಾಲೆಗೆ ಬರದಾಗ ನಾ ನೋಟ್ಸ್ ಬರೆಯದಿದ್ರೂ ಅವಳು ಬಂದು ನನ್ನೇ ಕೇಳುವಳು ಅಂತ ಭಾವಿಸಿ ಬರೆಯುತ್ತಿದ್ದ ಆ ಬಾಲಕ.. ಮುಂದೆ ಏನಾಯ್ತು ಅನ್ನೋದೇ ನನ್ನ ಬ್ಲಾಗ್ ನ ಹೊಸ ಕಥೆ..


coming soon!

Friday, December 23, 2011

ನಮ್ಮನೆ..

      
ಹೊಸಮನೆ ಕಟ್ಟುವ ಮುಂಚೆಯೇ ಕಟ್ಟಿದ ಹೆಸರಿಲ್ಲದ ಹಳೆಯ ಮನೆ.. ಮನೆ ಇಬ್ಬಾಗವಾದ ಕಾರಣ ನಾನು ನನ್ನ ದೊಡ್ಡಪ್ಪನ ಮನೆಗೆ ಹೋಗುವುದು ಅಪರೂಪ.. ಆದರೂ ಕರೆದಾಗ ಹೋಗದಿದ್ದರೆ ಇವನಿಗೆಂಥ ಧೀಮಾಕು ಅಂತ ಆವ್ರು ಅನ್ನಬಾರ್ದು ಅನ್ನೋ ಒಂದೇ ಕಾರಣಕ್ಕೆ ಅಲ್ಲಿಗೆ ಹೋದೆ.         
                     



            . ಅವ್ರ ಮನೆಯ ಹಿಂದೆಯೇ ಇರೋ ಹಳೆ ಮನೆ ನಾ ಚಿಕ್ಕಂದಿನಂದಲೂ ಅತಿ ಇಷ್ಟ ಪಟ್ಟ ಜಾಗ ಅಂದ್ರೂ ಅದ್ರಲ್ಲಿ ಎಳ್ಳಷ್ಟೂ ತಪ್ಪಿಲ್ಲ. ಹಿಂದೆ ಹೋಗುತ್ತಲೇ ಎದುರಾಗೋ ದನಗಳ ಕೊಟ್ಟಿಗೆ, ಅದರಲ್ಲಿ ಮಿಂಚಿನಂತೆ ಬಾಲವನ್ನೆತ್ತಿಕೊಂಡು ಆಡೋ ಪುಟ್ಟ ಕರುಗಳು, ಉದ್ದ ಕೋಡಿನ ವಾರೆ ಕೋಡಿನ ಸೆಗಣಿ ವಾಸನೆ ಹೊತ್ತು 'ವಯ್ಯ್,ವ್ಯಾಕ್' ಎನ್ನೋ ಸೋಂಬೇರಿ ಎಮ್ಮೆಗಳು.. ಬಲೆ ಹೊಡೆಸಿಕೊಳ್ಳದೇ ಓರಲೆ ಹಿಡಿದರೂ ಸಹ ತಮ್ಮ ವಯಸ್ಸನ್ನು ಮುಚ್ಚಿಕೊಳ್ಳಲು ನಾಚುತಿರುವ ಹಲಸಿನ ಮರದ ಪಕಾಸಿ, ಅದರ ಮೇಲಿನ ಕೆಂಪು ಹೆಂಚು, ಪಕಾಸಿ ಮಧ್ಯದಲ್ಲಿ ಹೂವಿನ ಗೊಂಚಲಿನಂತೆ ನೇತಾಡೋ ಮೆದೆಹುಲ್ಲಿನ ತೆನೆ.. ಇವೆಲ್ಲಾ ನೋಡಿದಾಗ ತಿಳಿದೋ ತಿಳಿಯದೇ ನಾ ನನ್ನೇ ಮರೆತುಹೋಗಿದ್ದೆ.

              ಕೊಟ್ಟಿಗೆಯ ದಾಟುತ್ತಲೇ ಎದುರಾಗುವ ಹಳೆಮನೆಯ ಮೆಟ್ಟಿಲಲ್ಲಿ ಕೆತ್ತಿದ ೧೦-೧೨-೧೯೯೧ ಎಂಬ ಸ್ಫುಟಾಕ್ಷರಗಳು ಅದೊಮ್ಮೆ ನನ್ನ ಕಣ್ಮನ ಕಲಕಿದವು. ನಾ ಹುಟ್ಟಿದ್ದು ಹಳೆ ಮನೆಗೂ ಮುಂಚೆ ಇದ್ದ ಇನ್ನೊಂದು ಹಳೆ ಮನೆಯಲ್ಲಿಯಂತೆ.. ಅದೊಂದು ಎರಡಂತಸ್ತಿನ ಹಿಂದೆ ಮೂವತ್ತು ಎಕರೇ ಅಡಿಕೆ ತೆಂಗು ಬಾಳೆ ಸಾಂಬೆ ಹಲಸು ಮಾವು ಮತ್ತೊಂದು ಮಗದೊಂದು ಸಸ್ಯಾದಿ ಸಸ್ಯಗಳಿಂದ ಕೂಡಿದ ಮುಂದೆ ಭಯಂಕರ ಕಾನನದಿಂದ ಸಂರಕ್ಷಿಸಲ್ಪಟ್ಟ ಭೂತಾಕಾರದ ಮನೆಯಂತೆ. ಮನೆಯ ಮುಂದೆ ಚೌಕಿ, ಅದ್ರ ಹಿಂದೊಂದು ಮುಚೆಕಡೆ, ಒಳ ನಡೆದಂತೆ ಉಪ್ಪರಿಗೆಯ ಮೆಟ್ಟಿಲುಗಳು ಆಚೀಚೆ ಹತ್ತಾರು ಕೋಣೆಗಳು, ಇನ್ನೂ ಒಳ ಹೋದರೆ ಹಜಾರ, ಊಟದ ಮನೆ, ಅಡುಗೆ ಮನೆ, ಧಾನ್ಯ ಉಗ್ರಾಣ, ಫಣಥ, ಎಷ್ಟೊಂದು..!!

ಮನೆಯಲ್ಲಿದ್ದುದು ಮೂವತ್ತಕ್ಕೂ ಹೆಚ್ಚು ಮಂದಿಯಂತೆ.. ನಾನೇ ಮೊದಲ ಮೊಮ್ಮಗ ಅಂತೆ.. ಯಾವುದೂ ನೆನಪಿಲ್ಲ :( ನೆನಪಿದ್ದುದು ಒಂದೇ.. ಹೆಂಚಿನ ಮಧ್ಯೆ ಬೆಳಕು ಬರಲಿ ಎಂದು ಇಡುತ್ತಿದ್ದ ಚಿಕ್ಕ ಚಿಕ್ಕ ಗಾಜಿನ ಚೂರಿನ ಮಧ್ಯೆಯಲ್ಲಿ ಇಣುಕಿ ನೋಡುತ್ತಿದ್ದ ಬೆಳಕಿನ ಕೋಲು. ಅದನ್ನ ಏನಾದರೂ ಮಾಡಿ ಹಿಡಿದು ಮರದ ಮೇಲೆ ಕುಳಿತು ನನ್ನ ಗೋಳು ಹೊಯ್ದುಕೊಳ್ಳುತ್ತಿದ್ದ ಪೇರಳೆ ಹಣ್ಣನು ಹೊಡೆದು ಉದುರಿಸಬೇಕೆಂದು..




           ಮನೆಗೆ ಕಾಲಿಟ್ಟ ಕ್ಷಣ ಎಷ್ಟೆಲ್ಲಾ ನೆನಪಾಗುವುದು.. ಅದೆಷ್ಟು ನೋಡಬೇಕೆಂದೂ ಆಸೆಗಳಿದ್ದರೂ, ನೋಡಿದ್ದರೂ ನೆನಪಾಗದ ಸಂಗತಿಗಳೆಷ್ಟು..!! ಹಳೆ ಜೀವನವನ್ನು ಅದೆಷ್ಟು ಮಿಸ್ ಮಾಡ್ಕೋತೇನೆ ಅಂತ ಸುಮ್ಮನೇ ಒಬ್ಬನೇ ಕುಳಿತಾಗ ಅನಿಸೋದು ಸಹಜ.. ಆದರೂ, ಅದೆಷ್ಟೋ ಸಲ ಅರ್ಥವಾಗದ ಸಂಗತಿಗಳು ನನ್ನನ್ನು ಈಗಲೂ ಕಾಡುತ್ತವೆ.. ಬೆಂಗಳೂರಿನ ಮಾಲ್ ಗಳ ಸುತ್ತ ಗೆಳೆಯರೊಡನೆ ಅಡ್ಡಾಡುವಾಗ ಕೇವಲ ಎರಡೇ ನಿಮಷದಲ್ಲಿ ಮನಸ್ಸನ್ನೆ ಸಂಪೂರ್ಣವಾಗಿ ಬಂಧಿಸುವ ಭಯಂಕರ ಅಪಾರ್ಟ್‌ಮೆಂಟ್,ವಿಲ್ಲಾಗಳು ಸೆಳೆವುದು ಸಹಜ.. ಎಲ್ಲ ಮುಗಿದು ವಾಪಸಾದಮೇಲೆ ಕೊನೆಗೆ ಮತ್ತೊಮ್ಮೆ ಕಾಡುವುದು ಬಾಳಿ ಬದುಕಿ ಅನುಭವಿಸಿದ ಗತಕಾಲದ ನೆನಪುಗಳು ತರುವ ನಮ್ಮ ಹಳೆ ಮನೆ ಮಾತ್ರವೇ.. ಹುಟ್ಟಿದಿಂದಲೂ ನಮ್ಮನ್ನು ಎತ್ತಿ ಆಡಿಸು ನೆನಪುಗಳಿಗೆ ಜೀವ ಬೆಸೆವ ಹಳೆಯ ಮನೆ 'ಓಲ್ಡ್ ಈಸ್ ಗೋಲ್ಡ್' ಆನೊ ಪದಕ್ಕೆ ಮಾದರಿ. ಎಷ್ಟೇ ದುಡಿದು ದಣಿದು ಹಣ ಸಂಪಾದಿಸಿ ಬೆಂಗಳೂರಲ್ಲಿ ಮನೆ ಕೊಂಡು ಬದುಕಿದರೂ ಸಿಗದ ಸುಖ ಹಳೆ ಮುರುಕಲು ಮನೆಯಲ್ಲಿ ಸಿಗುವುದು ಒಂದು ಸೋಜಿಗವೇ. 'ಶಾಂತಿ' ಎಲ್ಲೆಲ್ಲಿ ನೆಲಸುತ್ತದೆ ಎಂದು ನನ್ನನ್ನೇ ನಾ ಕೇಳಿಕೋಂಡದ್ದೂ ಉಂಟು!

ಎಲ್ಲ ನೆನೆದಾಗ ಮನಕ್ಕೆ "ನೆನಪುಗಳ ಮಾತು ಮಧುರ" ಆನೊ ಮಾತು ಸುಳ್ಳಲ್ಲ ಅನಿಸುತ್ತದೆ... ಅದೆಷ್ಟು ಸತ್ಯವಾದ ಮಾತು!

Saturday, December 17, 2011

ಶಿಕ್ಷಣ ಎಂಬ ದ್ವಂದ್ವ ನೀತಿ...

             ಶಾಲಾ ದಿನಗಳು ಎಂದಿಗೂ ಮರೆಯಲಾಗದ ಕ್ಷಣಗಳು.. ಗಡಿಯಾರವನಾದರೂ ಹಿಂದೆ ತಿರುಗಿಸಬಹುದು ಆದರೆ ಬಾಲ್ಯವನ್ನು ಮಾತ್ರ ಹಿಂದೆ ತರಲು ಎಂದಿಗೂ ಸಾಧ್ಯವಿಲ್ಲ..  ಶಿಕ್ಷಣದ ಬಗ್ಗೆ ಬರೆಯಲು ಹೋಗಿ "ಏನಪ್ಪಾ ಇವ ಈ ತರ ಕೊರೀತ ಇದಾನೆ" ಅಂತ ನೀವು ಅಂದ್ಕೊಂಡ್ರೆ ಅದ್ರಲ್ಲಿ ನಿಮ್ಮ ತಪ್ಪಿಲ್ಲ ಬಿಡಿ. ಈ ವಿಷ್ಯದ ಬಗ್ಗೆ ಬರ್ಯೋಕೂ ಒಂದು ಕಾರಣ ಇದೆ. ಕಾರಣ ಇಲ್ದೇ ಯಾರು ಏನನ್ನೂ ಬರ್ಯೂದು ಇಲ್ಲ, ಯಾವ ಕೆಲ್ಸಾನೂ ಮಾಡೋದಿಲ್ಲ. ಹೌದು ತಾನೆ?

          ಮೊನ್ನೆ ಮೊನ್ನೆ ಖಾಸಗಿ ಚಾನೇಳಿನಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಬೇಕಾದಾಗ ಶಿಕ್ಷೆಯನ್ನೇ ಕೊಡಬಾರದು ಎಂದು ಹಳ್ಳಿಯ ಶಾಲೆಯ ತೋರಿಸಿದ್ದೆ ನಂಗೆ ಬರೆಯಲು ತುರಿಕೆ ಬರಿಸಿದ ವಿಷಯ..





        "ಗಿಡವಾಗಿ ಬಗ್ಗದು ಮರವಾಗಿ ಬಗ್ಗೀತೇ"? ಅಂತ ಹಿರಿಯರು ತಿಳಿಹೇಳುವುದುಂಟು.. ಅದು ಅಕ್ಷರಶಃ ಸತ್ಯವಾದ ಮಾತು. ಎಷ್ಟು ಜನ ನಿಮ್ಮಲ್ಲಿ ಹಳೆ ಮೇಷ್ಟರ ಹತ್ತಿರ ಪೆಟ್ಟು ತಿಂದೂ ಬುದ್ಧಿ ಕಲಿತೋ ಕಲಿಯದೇ ಇರುವವರೋ ಇದ್ದೀರಿ.; ಬುದ್ಧಿ ಕಲಿಯದಿದ್ರೆ ಹೋಗ್ಲಿ ಬಿಡಿ, ತಪ್ಪಂತೂ ಮಾಡಿದ್ದೀರಿ ಅಂತ ಅರಿತಿದ್ದೀರಿ ತಾನೆ?

ಮಾಡಿದ ತಪ್ಪನ್ನು ನೋಡಿಕೊಂಡು ಸುಮ್ಮನೇ ಇದ್ರೆ ಆವ್ರು ಮೇಷ್ಟ್ರಾಗೋಕೆ ಸಾಧ್ಯವೇ? ಹಾಗೇನಾದ್ರೂ ಇದ್ದಿದ್ರೆ ನಮ್‍ನೆಲ್ಲ ನಮ್ಮ ಅಪ್ಪ ಅಮ್ಮ ಶಾಲೆಗೆ ಯಾಕೆ ಕಳಿಸ್ತಾ ಇದ್ರು ಅಲ್ವಾ?

ಮನೇಲಿದ್ದ ನಮ್ಮ ಚೆಸ್ಟೆಯ ಹತೋಟಿಗೆ ತರಲಾಗದೇ ಒದ್ದಾಡೋ ಅಪ್ಪ ಅಮ್ಮ, ಹೋಗ್ಲಿ ಈ ಮಂಗ ನನ್ನ ಮಗನ ಬಾಲನ ಮೇಷ್ಟ್ರ ಕೈಗೆ ಕೊಟ್ರೆ ಒಂದಿಂಚಾದ್ರು ಕಡಿಮೆ ಮಾಡಿ ಮನುಷ್ಯ ಜನ್ಮವಾದ್ರೂ ಬರಬಹುದು ಅನ್ನೋ ನಂಬಿಕೆಯಿಂದಲೇ ತಾನೆ ನಮ್‍ನೆಲ್ಲ ಶಾಲೆಗೆ ಕಳಿಸೋದು?
ಹುಟ್ಟುವಾಗ ಎಲ್ಲ ಮಗುವೊ ಮಂಗವೆ, ಅದ್ರಲ್ಲಿ ಯಾವುದೇ ರೀತಿಯ ಅಪನಂಬಿಕೆ ಅಥವಾ ಸಂಶಯ ಇಲ್ಲವೇ ಇಲ್ಲ.. ಬಾಲ್ಯದಲ್ಲಿ ಮೇಷ್ಟ್ರು ಒದ್ದು ತಿದ್ದಿದ ನಂತರವೇ ನಮಗೆಲ್ಲ ಒಂದು ಸ್ಪಷ್ಟ ಮಾನವ ರೂಪ ಬರುವುದು..

ನಾನೂ ಶಾಲೆಗೆ ಹೋಗ್‌ಬೇಕಾದ್ರೆ ದಿನಾನು ಗಲಾಟೆ ಮಾಡುತ್ತಿದ್ದ ಭೂಪ. ಒಂದಿನ ಏನಾಯ್ತು ನೀವೇ ಕೇಳಿ. ಆರನೆ ತರಗತಿ, ಮುರಿದ ಮಾಡಿನ ಕಾನನ ಮಧ್ಯದ ದಪ್ಪ ಪಕಾಸಿಯ ಹಳ್ಳಿ ಶಾಲೆ.. ಉದ್ದನೆ ಬೆಂಚು ನಮಗೆಲ್ಲ ಕೂರೋಕೆ.. ನಮ್ಮ ಗೋಣಿಚೀಲದಂತ ಬ್ಯಾಗುಗಳನ್ನ ನೋಡಿದ ಮೇಷ್ಟ್ರು ಜಾಸ್ತಿ ಇದ್ದ ಬೆಂಚನ್ನ ಬ್ಯಾಗ್ ಇಡೋಕೆ ಅಂತ ತರಿಸಿಕೊಟ್ಟರು. ಎಲ್ಲ ಹುಡುಗ್ರೂ ಶಿಸ್ತಾಗಿ ಉತ್ಸೂಹರಾಗಿ ಬ್ಯಾಗುಗಳನ್ನ ಬೆಂಚ್ ಮೇಲಿಟ್ರೆ, "ವಜ್ರಮುನಿ, ಸುಧೀರ್" ನಂಥ ಚಾಲಿ ಬರಿಸೊ ಖಳ ನಾಯಕರ ಚಿತ್ರಗಳನ್ನ ನೋಡಿದ್ದ ನನಗೆ, ಬ್ಯಾಗ್ ನ ನೆಲಡ್ ಮೇಲಿಟ್ಟು ಕಾಲನ್ನ ಯಾಕೆ ಮೇಲೆ ಇಟ್ಕೊಬಾರದು ಎಂದು ಮನಸ್ಸಿಗೆ ಅನಿಸಿದ್ದು ಸಹಜವೇ.. (ಒಪ್ಪಿದಿರಿ ಅಲ್ವಾ. ಹಾಗೆ ಬನ್ನಿ ದಾರಿಗೆ..) ಮನಸ್ಸಿಗೆ ಅನ್ಸಿದ್ನೆಲ್ಲ ಮಾಡಿದ್ರೆ, ಪ್ರಪಂಚ ಕೇಳುತ್ತಾ? ಆದ್ರೆ ನಾ ಜಾಸ್ತಿ ಯೋಚ್ನೆ ಮಾಡ್ಲೆ ಇಲ್ಲ ಬಿಡ್ರಿ, ಬ್ಯಾಗ್ ನ ಕಾಲ್ ಕೆಳಗೆ ಹಾಕಿ, ಕಾಲನ್ನ ಮೇಲಕ್ಕೆ ಇಟ್ಟೆ ನೋಡಿ.. ಮುಂದೇನಾಯ್ತು?


ನನ್ನ ಕಂಡ್ರೆ ಮುದ್ದು ಮಾಡ್ತಾ ಇದ್ದ ರಾಮಸ್ವಾಮಿ ಮೇಷ್ಟ್ರು ಧಡಕ್ಕಂಥ ರಾಮಾವತಾರ ಬಿಟ್ಟು ನರಸಿಂಹಾವತಾರ ಆಗುವುದೇ.. ಮುಂದಿನ ಬೆಂಚಿನ ಹುಡುಗನ ಕರೆದು, ಹೋಗಿ ರೂಲರ್ ತಗೊಂಡ್ ಬಾರೋ ನಾಗ್ರಾಜ ಎಂದಾಗ, "ಬಿಡು, ನಂಗಲ್ಲ" ಅಂತ ಯೋಚನೆ ಮಾಡುತ್ತಿದ್ದ ನಂಗೆ, ರೂಲರ್ ಯದ್ವಾ ತದ್ವಾ ನನ್ನ ಹಣ್ಣುಗಾಯಿ ನೀರುಗಾಯಿ ಮಾಡಿದ ಮೇಲೆಯೇ ಬಾಹ್ಯ ಲೋಕದ ಪರಿಚಯ ಮಾಡಿದ್ದು..

ಇಷ್ಟೆಲ್ಲಾ ಯಾಕೆ ಹೇಳಿದೆ ಅಂದ್ರೆ, ಶಿಕ್ಷಣದಲ್ಲಿ ಶಿಕ್ಷೆಯೂ ಒಂದು ಬಹು ಮುಖ್ಯವಾದ ಭಾಗ. ಅದು ಸರಿಯಾದ ಸಮಯದಲ್ಲಿ ಉಪಯೋಗಿಸದಿದ್ದರೆ, ಮಕ್ಕಳಲ್ಲಿ ಸಹನೆ ಸಂಯಮದ ಮೊಳಕೆ ಮೂಡದು.

ಲಕ್ಷ ಲಕ್ಷ ಹಣ ಖರ್ಚು ಮಾಡಿಯೂ ಮಕ್ಕಳಿಗೆ ಒಳ್ಳೆಯ ಶಿಕ್ಷಣವ ಒದಗಿಸಲಾಗದ ಪೇಟೇ ಕಾನ್‌ವೆಂಟ್ ಗಳ ನಡುವೆ ಅದೆಷ್ಟೋ ಎಲೆ ಮರೆಯ ಕಾಯಿಯಂತೆ ಸಮೃದ್ಧಿಯ ಹಳ್ಳಿ ಶಾಲೆಗಳಿವೆ..
"ಹಾವೂ ಸಾಯಬಾರದು, ಕೋಲೂ ಮುರಿಯಕೂಡದು" ಎಂಬ ದ್ವಂದ್ವ ನೀತಿ ದಯವಿಟ್ಟು ಶಿಕ್ಷಣದಿಂದ ಹೊರಗಿಡಿ..



ಶಿಕ್ಷಿಸಿದರೇನು? ಮಕ್ಕಳು ಸುಶೀಕ್ಷಿತರಾಗಿ, ದೇಶ ಸುಭೀಕ್ಷೆಯಾದರೆ ಕೊಟ್ಟ ಶಿಕ್ಷೆಯೂ ಸಾರ್ಥಕವಲ್ಲವೆ?