Tuesday, October 9, 2012

ಪ್ರೀತಿ ಫಲ ಪ್ರತಿಫಲ ..


   
ಹಿಮಾಲಯದ ಸಮೀಪದ ಒಂದು ಹಳ್ಳಿ. ಅದು ಕಡು ಚಳಿಗಾಲದ ಒಂದು ಸಂಜೆ.. ಹಿಮಾಲಯದ ಸೌಂದರ್ಯ ನೋಡಬಯಸಿದ ವಿದೇಶಿ ನಡುವಯಸಿನ ಮಹಿಳೆಯೊಬ್ಬಳ ಲಕ್ಸುರಿ ಕಾರು ಪಂಖ್ಚರ್ ಆಗಿ ನಿಂತಿತ್ತು.




      ಸಹಾಯಕ್ಕಾಗಿ ಕೈ ಚಾಚಿ ಮೈ ಕೊರೆವ ಚಳಿಯಲ್ಲಿ ದಾರಿಹೋಕನೊಬ್ಬನಿಗೆ ಕಾದು ನಿಂತಿದ್ದಾಳೆ ಯಾರು ಬರುತ್ತಿಲ್ಲ. ಸೂರ್ಯ ಬೇರೆ ಮುಳುಗಿ ಪಡುವಣದಿ ಮಂಜು ಆವರಿಸಿ ಕತ್ತಲು ಚಳಿಯು ಸೀರಿ ರೌದ್ರ ನರ್ತನ ಮಾಡುತ್ತಿವೆ. ಅವಳ ಪರಿಚಯಸ್ತರಿಗೆ ಕರೆ ಮಾಡಬೇಕೆಂದರೂ ಆ ಕಡು ಕುಗ್ರಾಮದಿ ಸಂಪರ್ಕಕ್ಕೆ ದಾರಿಯೇ ಇಲ್ಲ. ಮುದುಡಿದ ಮುಖ ಹೊತ್ತು ಕಾಯುತ್ತಿರುವ ಹೊತ್ತಿಗೆ ದೂರದಲ್ಲಿ ದಪ್ಪ ಕಂಬಳಿಯ ಉಡುಗೆಯ ಹೊದ್ದ ಮಧ್ಯವಯಸ್ಕನೊಬ್ಬ ಇತ್ತ ಬರುತ್ತಿರುವುದು ಕಂಡಿತು. ಸಹಾಯಕ್ಕಾಗಿ ಕೂಗಿದವಳೇ ಸನ್ನೆಯ ಮೂಲಕ ತನ್ನ ಕಾರು ಕೆಟ್ಟು ನಿಂತಿದೆ ಎಂದಷ್ಟೇ ಹೇಳಿದಳು. ಆತನ ಹೆಸರು 'ಕುಂ ಚುಕ್'. ಕುಗ್ರಾಮವಾದರೂ ತಕ್ಕ ಮಟ್ಟಿಗೆ ಇಂತಹ ಸನ್ನಿವೇಶದಲ್ಲಿ ಪಳಗಿದ್ದ ಕುಂ ಚುಕ್ ತಕ್ಕ ಮಟ್ಟಿಗೆ ಇಂಗ್ಲೀಷ್ ಬಲ್ಲವನಾಗಿದ್ದ. ಮೇಡಂ ಜೀ, ನೀವು ಸರಿ ಎಂದರೆ ಕಾರನ್ನು ನಾ ಸರಿ ಮಾಡಬಲ್ಲೆ. ನಿಮಗೆ ಈ ಚಳಿ ತಡೆಯಲ್ಲಾಗದು. ಅಮ್ಮಾ, ನೀವು ಕಾರಿನಲ್ಲಿ ಕುಳ್ಳಿರಿ" ಎಂದೂ ಅವಳಿಗೆ ಧೈರ್ಯ ಹೇಳಿ, ಕಾರಿನ ಟೈರ್‌ನ್ನು ಸ್ವಲ್ಪ ಹೊತ್ತಿನಲ್ಲಿಯೇ ಬದಲಿಸಿ ಕೊಟ್ಟ. ನೋಡಲು ಕುಂ ಚುಕ್ ಮಧ್ಯ ವಯಸ್ಕನಾದರೂ ಆತನ ಕಂಗಳಲ್ಲಿ ಅದೇನೋ ಅದಮ್ಯ ಕಾಂತಿ, ಬಣ್ಣಿಸಲಾಗದ ದಯೆ ತುಂಬಿ ಬರುವಂತಿದ್ದ್ಡವು. ಉಡುಗೆಯಲ್ಲಿ ಬಡತನವೂ ತುಂಬಿತ್ತು. ವಿದೇಶಿ ಮಹಿಳೆ ಕೊಂಚವೂ ಯೋಚಿಸದೇ ೫೦೦ ರ ಇಪ್ಪತ್ತು ನೋಟುಗಳ ಕಂತೆಯೊಂದನು 'ಇಗೋ, ನಿನ್ನ ಸಹಾಯವ ಎಂದಿಗೂ ಮರೆಯಲಾರೆ. ನಿನ್ನನು ಸದಾ ನೆನೆಯುವೆ." ಎಂದಳು.




ಕುಂ ಚುಕ್ ಸ್ವಾಭಿಮಾನಿ, ಕೊಟ್ಟ ಹಣವನ್ನು ಅವರಿಗೆ ತಿರುಗಿ ನೀಡಿ, "ಇದು ನಮ್ಮ ಭಾರತೀಯ ಸಂಪ್ರದಾಯ. ಸಹಾಯ ಮನದ ಮೂಲೆಯಿಂದ ಮಾಡಿದಾಗ ಹಣ ಪಡೆಯಲಾರೆವು. ನಾ ನಿಮಗೆ ಸಹಾಯ ಮಾಡಿದಂತೆ, ಕಷ್ಟದಲ್ಲಿರುವ ಇನ್ನೊಬ್ಬರಿಗೆ ನೀವು ಸಹಾಯ ಮಾಡಿರಿ. ಆದರೆ ನೆನಪಿಡಿ, ನಿಮ್ಮ ಮನಸ್ಸು ನಿಮಗೆ ಸಹಾಯ ಮಾಡು ಅಂತ ತೋರಿದಲ್ಲಿ ಮಾತ್ರ ಸಹಾಯ ಮಾಡಿರಿ. ಹಾಗೆ ಮಾಡುವಾಗ ನನ್ನನು ನೆನೆದರೆ ಅಷ್ಟೇ ಸಾಕು. ನನಗೆ ಈ ಹಣ ವಾಪಸು ನೀಡಿದಂತೆ ಎಂದು ಹೇಳಿ ಸರ ಸರ ನಡೆದುಬಿಟ್ಟನು'. ಮಹಿಳೆಯ ಕಂಗಳಲ್ಲಿ ನೀರು ತುಂಬಿತ್ತು.




    ಹೊತ್ತಾಯಿತೆಂದು ಕಾರು ಚಾಲಿಸಿ, ಒಂದೈದು ಕಿಲೋಮೀಟರ್ ಮುಂದೆ ಹೋದ ಬಳಿಕ ಹೊಟ್ಟೆ ಹೊಟ್ಟೆ ಹಸಿದಂತಾಗಿ, ಹತ್ತಿರದ ಚಿಕ್ಕ ಜೊಪಒದಿಯಂತಹ ಹೊಟೆಲ್ ಎದುರಿಗೆ ಕಾರ ನಿಲ್ಲಿಸಿದ ಮಹಿಳೆ, ಜೋಪಡಿಯ ಒಳಹೊಕ್ಕು ಯಾರಾದರೂ ಇದ್ದಾರೆಯೇ ಎಂದು ಕರೆದಳು. ಕರೆ ಕೇಳಿ ಹೊರ ಬಂದಳು ೮ ತಿಂಗಳು ತುಂಬಿದ ಬಸುರಿ. ವಿದೇಶಿ ಮಹಿಳೆ 'ಇಲ್ಲಿ ಊಟ ಸಿಗುವುದೇ ಎಂದು ವಿಚಾರಿಸಲು', ಐದು ನಿಮಿಷದಲ್ಲಿ ಅವಳಿಗೊಪ್ಪುವಂಥ ಚಪಾತಿಯ ಒಳಗೆ ಬೇಯಿಸಿದ ಆಲೋ,ಮೆಣಸು,ಈರುಳ್ಳಿ ಬೆಳ್ಳುಳ್ಳಿಯ ಹದವಾದ ಮಿಶ್ರಣದ ನಾಲ್ಕು ರೋಲ್‌ಗಳನ್ನು ಸಿಹಿ ಚಟ್ನಿಯೊಂದಿಗೆ ನಿಧಾನವಾಗಿ ನಡೆಯುತ್ತಾ ತಂದಿತ್ತಳು. ರೋಲ್ ಗಳ ಅದಮ್ಯ ರುಚಿಗೆ ಮನ ಸೋತ ಮಹಿಳೆ ಮನೆಯ ಪರಿಸ್ಥಿತಿಯನ್ನು ಗಮನಿಸಿ, 'ಅಯ್ಯೋ, ಇಂಥ ಸುಂದರ ಮಹಿಳೆಗೆ ಯಾಕಿಂತಹ ಸ್ಥಿತಿ. ಆ ದೇವರು ಯಾಕೆ ಹೀಗೆ ಎಂದು' ನೆನೆಯುತ್ತಾ ಅವಳು ನೀಡಿದ ಬಿಲ್ ಚೀಟಿಯ ಕೆಳಗೆ ಅದೇ ೫೦೦ ರ ಇಪ್ಪತ್ತು ನೋಟುಗಳಾನಿತ್ತು 'ಕುಂ ಚುಕ್, ನಿನ್ನ ಮಾತಿನಂತೆ ನನ್ನ ಮನಸಾರೇ ಈ ಹಣವನು ಇವಳಿಗೆ ನೀಡುವೇ ಎಂದು ಮನದಲ್ಲೇ ಅಂದುಕೊಂಡು ಬಿಲ್ ಚೀಟಿಯ ಕೆಳಗೆ ಬೇಗ ಬೇಗನೆ ನಾಲ್ಕು ಸಾಲುಗಳನು ಬರೆದು, ಕಾರನ್ನೇರಿ ಹೊರಟೆಹೋದಳು.

ಒಳಗಿಂದ ಧಾವಿಸಿದ ತುಂಬಿದ ಬಸುರಿ ಚೀಟಿಯ ಕೆಳಗೆ ಇದ್ದ ಗರಿ ಗರಿ ನೋಟುಗಳ ನೋಡಿ ಧಿಗ್ಬ್ರಾಂತಿಯಿಂದ 'ಏನಿದು,ಇಷ್ಟೊಂದು ಹಣ? ಯಾಕೆ? ಹೇಗೆ ಅವಳಿಗೆ ಇದನ್ನು ವಾಪಸ್ಸು ನೀಡಲಿ ಎಂದು ಬಿಲ್ ಚೀಟಿ ತಿರುಗಿಸೆ ನೋಡಲು ಹೀಗೆ ಬರೆದಿರುತ್ತದೆ.

"ಪ್ರಿಯ ಮಿತ್ರೆ, ನೀ ನೀಡಿದ ಊಟದ ಸವಿ ನನಗೆ ಇನ್ನೆಲ್ಲೂ ದಕ್ಕಿಲ್ಲ. ಮನಸ್ಸಿಗೆ ಯಾಕೋ ನೀನು ಕಷ್ಟದಲ್ಲಿರುವೆ, ಸಹಾಯ ಮಾಡಲೇಬೇಕೆಂದು ಈ ಹಣವನ್ನಿಟ್ಟಿದ್ದೇನೆ. ಇದನ್ನು ಸದುಪಯೋಗ ಮಾಡಿಕೊ, ನಿನಗೇನಾದರೂ ಇದನ್‌ನ್ನು ವಾಪಸ್ಸು ಮಾಡಬೇಕೆಂದಿದ್ದಲ್ಲಿ ದಯವಿಟ್ಟು ಅವಶ್ಯರಿಗೆ ಕಷ್ಟದಲ್ಲಿದಾಗ ನೀಡು. ಇದು ನಾ ಭಾರತೀಯನೊಬ್ಬನಿಂದ ಕಲಿತ ಸಂಸ್ಕೃತಿ ಎಂದಷ್ಟೇ ಬರೆದಿರುತ್ತದೆ".

ಕನ್ಣಾಳಿಯಲ್ಲಿ ನೀರು ತುಂಬಿ ಬಂದು.. ಸ್ವೆಟರ್ ನ ಮೂಲೆಯಿಂದಲೇ ಅರಿಯದಂತೆ ಒರೆಸಿಕೊಂಡು ಮನೆಗೆ ಗಂಡ ಬರಲೆಂದು ಕಾಯುತ್ತಿರುವಾಗಲೇ ಅವಳ ಗಂಡ ಬರುತ್ತಾನೆ. ಬಾಗಿಲಲ್ಲೇ ಆತನನ್ನು ತಬ್ಬಿ ಎದೆಗೆ ಮುತ್ತನಿತ್ತು, "ನನ್ನ ಹೆರಿಗೆಗೆಂದು ನೀ ಇನ್ನು ಕಷ್ಟ ಪಡಬೇಕಿಲ್ಲ. ಇಲ್ಲಿ ನೋಡು ಯಾರೋ ವಿದೇಶಿ ತಾಯಿ ನೀಡಿದ ಈ ಹಣ. ಇದೋ ಈ ಚೀಟಿ ಓದು" ಎಂದಾಗಲೇ ಸರ ಸರ ನೇ ಚೀಟಿ ಓದಿದ ಗಂಡ ನ ಕಣ್ಣಲೂ ಆನಂದ ಬಾಷ್ಪ. ಆತ ಬೇರೆ ಯಾರು ಅಲ್ಲಾರೀ, 'ನಮ್ಮ ಕುಂ ಚುಕ್'.

- ಎಲ್ಲೋ ಓದಿದ್ದು, ಇಂಗ್ಲೀಷ್ ನಿಂದ ಅನುವಾದಿಸಿದ್ದು.

.

Thursday, June 14, 2012

ನಿಮಿಷದಲ್ಲಿ ಬರೆದ ಕವನಗಳು...


ಕಣ್ಣು.. ಕನಸು..


ಕಂಗಳು ನನದಾದರೇನು.. ಕನಸು ನಿನದಲ್ಲವೇ..?
ಕನಸು ನಿನದಾದರೇನು ಬದುಕು ನಮದಲ್ಲವೆ..
ಕಣ್ಣು ಕನಸು ಬದುಕು ಇದೆಂಥ ಹುಚ್ಚು ಸೊಗಸು..
ಪ್ರೀತಿಯೇ ಹಿಂಗೆ.. ಎಚ್ಚರವಿದ್ದಾಗಲು ಕನವರಿಸುವ ಹಂಗೆ..


ಪ್ರೀತಿ...

ನಿನ ತುಟಿಯಂಚಿನ ಸಣ್ಣ ನಗುವಿಗಾಗಿ ನಾ ಸೊಲುವುದು ಪ್ರೀತಿ..
ನಾ ಸೋತರೂ ನಿನ ಗೆಲುವನು ಆಚರಿಸುವುದು ಪ್ರೀತಿ..
ನೀ ಅತ್ತೊಡೆ ನನ್ ಕಂಗಳಲಿ ನೀರ್ ಸುರಿವುದು ಪ್ರೀತಿ..
ಪ್ರೀತಿಗಿಲ್ಲ ಯಾವುದೊಂದು ರೀತಿ.. ಅದು ನಡೆದುಬರುತ್ತಿರುವುದೇ ದಿಗಂತದ ಮಕರ ಜ್ಯೋತಿಯ ರೀತಿ..!!!

Wednesday, May 30, 2012

ದೈವೇಚ್ಛೆ..!!

 ಅಂದು ಸೋಮವಾರ.. 

ಎಂದಿನಂತೆ ನೀಟ್ ಆಗಿ ಶೇವ್ ಮಾಡಿ ಶ್ರೀಧರ್ ಆಫೀಸ್ ಗೆ ಬಂದಿದ್ದ. ಮೂವತ್ತರ ಹರೆಯದ ಸಕ್ಕತ್ ಹ್ಯಾಂಡ್ಸಮ್ ಯುವಕ ಆತ. ಸುಂದರವಾದ ಹೆಂಡತಿ, ಮುದ್ದಾದ ಮಗು. ಒಟ್ಟಾಗಿ ಹೇಳೋದೇ ಆದ್ರೆ ಅವನದೊಂದು ಪರ್ಫೆಕ್ಟ್ ಫ್ಯಾಮಿಲಿ.

ಆಫೀಸ್ ಲೀ ಕೂತರೂ ಸಹ ಅದೆಂಥದೋ ಒಂದು ಹೇಳಲಾಗದ ಸಂಕಟ. ಈಗ ನಾವು ಬಸ್ ಸ್ಟ್ಯಾಂಡ್ ಲೀ ನಿಂತಾಗ, "ಛೇ, ಏನೋ ಮರೆತು ಬಿಟ್ನಲ್ಲ ಏನದು"? ಅಂತ ಯೋಚನೆ ಮಾಡ್ತೀವಲ್ವಾ? ಅದೇ ತರ.

ತನ್ನದೇ ಡೆಸ್ಕ್ನಲ್ಲಿದ್ದ ಕಂಪ್ಯೂಟರ್ ನ ಸ್ವಿಚ್ ಆನ್ ಮಾಡಿದಾತನೆ, ಎರಡು ನಿಮಿಷ ಕಣ್ಣು ಮುಚ್ಚಿ ಏನು ಮರೆತೇ ಎಂದು ಯೋಚಿಸುತ್ತಿದ್ದಾಗಲೇ ಒಂದು ಕ್ಷಣ ತಾನೇನು ಮಾಡಿದ್ದೇನೆಂದು ನೆನೆದು ಹೌಹಾರಿದ. ಕೂತ ಜಾಗದಲ್ಲೇ ಬೆವೆತುಹೋದ. ಮನೆಯಿಂದ ಹೊರಡುವಾಗ ಮಯ್ಯಿಗೆ ಪೂಸಿಕೊಂಡಿದ್ದ ಕಾಮಸೂತ್ರ ಡಿಯೋ ತನ್ನ ಕಂಪನ್ನು ಕಳೆದುಕೊಂಡಿತ್ತು!!

ಹಾಲ್ ನಲ್ಲಿ ಶೇವ್ ಮಾಡುತಿದ್ದ ಆತ, ಮರೆತು ಬ್ಲೇಡ್ ನ ಅಲ್ಲೇ ಬಿಟ್ಟುಬಂದಿದ್ದ. ಹೆಂಡತಿ ಅಡುಗೆ ಮನೆಯಲ್ಲಿದ್ದಳು, ಎರಡು ವರ್ಷದ ಮಗು ಅಲ್ಲೇ ಆಡುತ್ತಿತ್ತು. ಆ ಬ್ಲೇಡ್ ಅವನ ಅವತ್ತಿನ ಸಂತೋಷಕ್ಕೆ ಕತ್ತರಿ ಹಾಕಿತ್ತು..


 ಫೋನ್ ತೆಗೆದವನೆ, ಹೆಂಡತಿಗೆ ಫೋನಾಯಿಸಿದ. ಕರೆಯನ್ನೂ ಹೆಂಡತಿ ಸ್ವೀಕರಿಸಲಿಲ್ಲ.. ಇನ್ನೆರಡು ಬಾರಿ ಕಾಲ್ ಮಾಡಿದ, ಉಹೂಂ!! ಉತ್ತರವಿಲ್ಲ. ಇನ್ನೂ ಮನಸ್ಸ ತಡೆಯಾದ ಆತ ಹೊರಗೆ ಓಡಿದವನೇ ಕಾರನ್ನೇರಿ ಶರವೇಗದಿ ಚಲಾಯಿಸಿದ. ಡ್ರೈವ್ ಮಾಡುವಾಗಲೆಲ್ಲಾ ಮಗು ಬ್ಲೇಡ್ ನಿಂದ ಮುಖ ಮೈಯನ್ನೆಲ್ಲ ಕೊಯ್ದುಕೊಂಡಂತೆ ಅವನಿಗೆ ಭಾಸವಾಗುತ್ತಿತ್ತು. ಕರುಳನ್ನು ಹಿಂಡಿದ ಅನುಭವ. 'ಛೇ, ನಾ ಎಷ್ಟು ಬೇಜವಾಬ್ದಾರಿಯ ಮನುಷ್ಯ" ಅಂತ ಅನಿಸತೊಡಗಿತ್ತು. ಮನೆ ತಲುಪುವದರಲ್ಲಾಗಲೇ ನಲ್ವತ್ತು ನಿಮಿಷವಾಗಿತ್ತು.. 

ಉಸಿರ ಬಿಗಿಹಿಡಿದು ಒಂದೇ ಸಮನೆ ತನ್ನ ಅಪಾರ್ಟ್‌ಮೆಂಟ್ ನ ಮೂರನೇ ಫ್ಲೋರ್ ಗೆ ಓಡಿದಾತನೆ ತನ್ನ ಫ್ಲಾಟ್ ಗೆ ಧಾವಿಸಿದ. ಬಾಗಿಲು ತೆರೆದೇ ಇಟ್ಟಿತ್ತು. ಹೆಂಡತಿ ಸ್ನಾನಕ್ಕೆ ಹೋಗಿದ್ದಳು.. ಹಾಲ್‌ನಲ್ಲ್ಲಿ ಮಗು ಖುಶಿಯಿಂದ ಆಟ ಆಡುತ್ತಿತ್ತು. ಬ್ಲೇಡ್ ಅವನು ಹಾಲ್ ನಲ್ಲಿ ಬಿಟ್ಟಿರಲಿಲ್ಲ. ಮನಸ್ಸಿಗೆ ಹಾಯ್ ಎನಿಸಿತು. ಸೆಖೆ ಎನಿಸಿ, ಫ್ಯಾನ್ ಆನ್ ಮಾಡಿದವನೇ "೫" ನೇ ಅಂಕಿಗೆ ತಿರುಗಿಸಿದ..

ಮಗುವನ್ನು ನೋಡಿದವನೆ, ಅಪ್ಪಿ ಮುದ್ದಾಡಿ "ಚಿನ್ನ, ಅದೆಷ್ಟು ಭಯವಾಗಿತ್ತು ನನಗೆ. ನೀ ನನ್ನ ಜೀವ" ಅಂತ ಖುಶಿಯಿಂದ ಎತ್ತಿ ಹಾರಿಸಿ ಹಿಡಿಯಲು ಹೋದ. ಕಾಕತಾಳೀಯ...

ಮಗುವಿನ ತಲೆ ವೇಗವಾಗಿ ತಿರುಗುತ್ತಿದ್ದ ಫ್ಯಾನ್ ರೆಕ್ಕೆಗೆ ಸಿಕ್ಕಿತ್ತು. ಮಗು ತನ್ನ ಜೀವವ ತಂದೆಯ ಮುಗ್ಧ ಪ್ರೀತಿಗೆ ತೆತ್ತಿತ್ತು..!!

ದೊಡ್ಡಪ್ಪನಿಂದ ಆ ನತದೃಷ್ಟ ತಂದೆ ಮಗುವಿನ ಕಥೆ ಕೇಳಿದ ನನ್ನ ಕಣ್ಣೂ ಹನಿಗೂಡಿತ್ತು!!

Monday, April 9, 2012

ಒಂದು ಸಾರಿ ಮಾತಾಡಿ ಹೋಗಮ್ಮ...

               ಮನೆಗೆ ಕರೆ ಮಾಡುವುದ ನಿಲ್ಲಿಸಿದಾಗೆಲ್ಲ ಮನೆಯಿಂದ ರಜನೀ ಕರೆ ಮಾಡಿ, 'ರಕ್ಷಿತ, ನಿನಗೆ ನನ್ನ ನೆನಪೇ ಬರುವುದಿಲ್ಲವಾ'? ಅಂತ ಕೇಳುವುದು ನನಗೆ ಸಾಮಾನ್ಯ. ಹಾಗೆ ಕರೆ ಬಂತೆಂದರೆ ಕರೆ ಬಂದ ಎರಡು ವಾರದೊಳಗಾಗಿ ಮನೆಕಡೆ ಹೋಗಿ ಅವಳಿಗೆ ಮುಖ ತೋರಿಸಿಲ್ಲವೆಂದರೆ ಅವಳೂ,ಅಜ್ಜಿಯೂ ಇಬ್ಬರೂ ಮನ ನೊಂದುಕೊಳ್ಳುವರು. ಅಮ್ಮನಿಗೆ ರಜನೀ ಎಂದೂ,ಅಜ್ಜಿಗೆ ಅಮ್ಮ ಎಂದು ಕರೆಯುವ ನನ್ನ ನೋಡಿ ಪರಿಚಯವಾದ ಹೊಸ ಸ್ನೇಹಿತರಿಂದ ಹಿಡಿದು ಹಳೆ ಪರಿಚಯದ ಸ್ನೇಹಿತರೆಲ್ಲರೂ ಬಯ್ಯುವುದುಂಟು. ಇದಕ್ಕಾಗೇ ಶಾಲೆಯಲ್ಲೂ ಸಹ ಒದೆ ತಿಂದಿದ್ದೇನೆ.. ಆದರೆ ರಜನೀ ಮಾತ್ರ ಎಂದೂ ಬಯ್ದಿಲ್ಲ. ಅವಳಂಥ ಗರ್ಲ್ ಫ್ರೆಂಡ್ ಸಹ ನನ್ನ ಕಯ್ಯಲ್ಲಿ  ಇವತ್ತಿಗೂ ಸಹ ಹುಡುಕಲಾಗಿಲ್ಲ.






                ಎರಡು ತಿಂಗಳಾದರೂ ಮುಖ ತೋರಿಸದ, ವಾರೊಕ್ಕೊಮ್ಮೆಯೂ ಮನೆಗೆ ಕಾಲ್ ಮಾಡದಾಗ ರಜನೀಯ ಕರೆ ಬದರೆ ಅದರಲ್ಲೇ ಆಶ್ಚರ್ಯವಿಲ್ಲ. ಎಂದಿನಂತೆ ಕರೆ ಬಂದು ಮತ್ತೆ ಅದೇ ಪ್ರಶ್ನೆ. ಮಗನೆ, ನಾ ಯಾರೆಂದು ಗುರುತು ಸಿಕ್ಕಿತಾ? ಸರಿ ಕರೆ ಬಂದ ಎರಡನೆ ಶನಿವಾರದ ಸಂಜೆ ಮನೆಯಲ್ಲಿದ್ದೆ. ಈ ಸರಿ ಅವಳನ್ನು ಸ್ವಲ್ಪ ಖುಷಿ ಪಡಿಸುವ ಎಂದು ನನ್ನ ನಕ್ಷತ್ರಿಕ ಮಿತ್ರ 'ಕ್ಯಾಮರಾ' ವನ್ನ ಇಲ್ಲೇ ಬಿಟ್ಟು ಹೋಗಿದ್ದೆ. ಮನೆಗೆ ಹೋದಾಗಲೆಲ್ಲ ಬೆನ್ನಿಗೆ ಸಿಕ್ಕಿಕೊಂಡು ಕಾಡು ಅಳೆಯುವ ನಾನು, ಈ ಸಾರಿ ಅವಳೊಂದಿಗೆ ತುಸು ಸಮಯ ಕಳೆಯುವ ಎಂದೆ ಆಲೋಚಿಸಿದ್ದೆ. ಎಂದಿನಂತೆ ಮನೆಗೆ ಹೋದಾಕ್ಷಣ ಮನೆಯ ನಾಯಿಗಳು ತಮ್ಮ ಮೂಕಪ್ರೀತಿಯನ್ನು ಸ್ವಲ್ಪವೂ ಕಪತವಿಲ್ಲದೇ ಮುಖ,ಕೆನ್ನೆ,ಕೈ,ಮೈ ನೆಕ್ಕಿ ಪ್ರದರ್ಶಿಸಿದವು. ಮನಸ್ಸು ತುಸು ಹಗುರಾಗಿ.. ಎಲ್ಲರೊಂದಿಗೂ ಮಾತನಾಡಿ.. ನನ್ನ ಡಾರ್ಲಿಂಗ್ 'ಅಮ್ಮ' (ಅಜ್ಜಿ) ಯೂ ಸಹ.. 'ಬಂದ್ಯಾ ಮಾರಾಯ'. ಅಂತೂ ನಿನ್ನ ಮುಖ ನೋಡೋ ಭಾಗ್ಯ ಸಿಕ್ಕಿತಪ್ಪ.. ಆ ಫೋನು ಒಂದು ಎಂತಕೆ ನಿನಗೆ, ಮನೆಗೆ ಕರೆ ಮಾಡದ ಮೇಲೆ ಅಂತ ತರಾಟೆಗೆ ತೆಗೆದುಕೊಂಡರೂ, ಅವಳ ಕೋಪ ಹೆಚ್ಚು ಹೊತ್ತಿರುವುದಿಲ್ಲ. ಅವಳ ಮನಸ್ಸೇ ಅಂಥದ್ದು. ನಮ್ಮನೆಯಲ್ಲಿ ಬಹುವಾಚನವಿಲ್ಲ. ಏಕವಚನದಲ್ಲಿ ಪ್ರೀತಿ ಹೆಚ್ಚು. ಅಂತೂ ರಾತ್ರಿ ಊಟ ಎಲ್ಲ ಆಗಿ ನಿದ್ದೆಯೂ ಆಯಿತು. ನಾ ಮನೆಗೆ ಹೋದರೆ, ಅಕ್ಕಿ ರೊಟ್ಟಿ ಅಂತೂ ಗ್ಯಾರಂಟೀ. ಅದು ನನ್ನ ಪ್ರಾಣಕ್ಕೆ ಸಮ. ರೊಟ್ಟಿ ಮಾಡಲು ಬರದ ನಾನು, ಅಮ್ಮನ ಹತ್ತಿರ ಕಳಿಸಿಕೊಡ್ತಿಯಾ ಎಂದಾಗ. ಅವಳು ಹೇಳಿದಂತೆಯೇ, ಹಿಟ್ಟು ಕಲಸಿ.. ಹಾದವನ್ನೂ ಅರಿತು. ಇನ್ನೇನು ಕಾವಲಿ ಮೇಲೆ ಎಣ್ಣೆಯೂ ಸುರಿದಾಯಿತು. ಬಾಳೆ ಎಲೆಯ ಮೇಲೆ ಹಚ್ಚಿದ ರೊಟ್ಟಿಯನ್ನು ಚೋಯ್ ಅಂತ ಕಾವಲಿಯ ಮೇಲೆ ಹಾಕಿದ್ದೂ ಆಯಿತು. ಸುಮ್ಮನೇ ಪರಿಮಳವ ಆನಂದಿಸುತ್ತಿದ್ದ ನನಗೆ ಅಮ್ಮ, 'ರಕ್ಷಿತ,ನಿನಗೆ ನಾಗಮ್ಮ ಗೊತ್ತಾ ಅಂತ ಮಾತಿಗೆಳೆದಳು'. ಆದೆಷ್ಟೂ ಬಾರಿ ನಾವೆಲ್ಲರೋ, ನಮಗಾರಿಯದಂತೆಯೇ ಹೆಸರಿಗೆ ತಕ್ಕ ಮುಖವ ಮನದಲ್ಲೇ ಹುಡುಕುತ್ತೇವೆ. ಅಂತೆಯೇ, 'ಅಮ್ಮ, ಅವಳು ಕಪ್ಪಗೆ ಇದ್ದಾಳಾ? ಉದ್ದ ಜಡೆಯಾ ಎಂದೆ"?

ಇಲ್ಲಾ.. ನಮ್ಮ ನೆಂಟರ ಪೈಕಿಯಲ್ಲಿ ಅವಳೇ ಬೆಳ್ಳಗೆ  ಇದ್ದಳು ಎಂದಾಗ ನನಗೆ ನಾನೇ ಹಳಿದುಕೊಂಡೆ..
ನಾನು: ಇದ್ದಳು?? ಈಗ ಏನಾಯಿತು?
ಅಮ್ಮ: "ಮೊನ್ನೆ ವರೆಗೂ ಇದ್ದಳು.. ಪಾಪ ಮಾರಾಯ. ದೇವತೆಯಂತವಳು.. ಹೋಗಿಬಿಟ್ಟಳು.." ಎಂದು ಸುಮ್ಮನಾದಳು.
ನಾ ಮುಂದುವರಿಸಿದೆ.. 'ಏನಾಗಿತ್ತಂತೆ'?

ಅಮ್ಮ: "ಮುಟ್ಟಾಗಿತ್ತಂತೆ.. ತುಂಬಾ ರಕ್ತಸ್ರಾವ ಆಗ್ತಾ ಇತ್ತಂತೆ. ಹೇಳಿಕೊಳ್ಳುಕೇ ನಾಚಿಕೆ ಪಟ್ಟು ಮುಚ್ಚಿಟ್ಟು ರಕ್ತವೂ ನಿಲ್ಲದೇ ಉಸಿರೇ ನಿಂತು ಹೋಯ್ತಂತೆ. ಹಳ್ಳಿಯವರಣೆಲ್ಲ ದಡ್ಡ ಅಂತೆಲ್ಲ ಹೇಳ್ತಾರೆ. ಇವಳು, ದೇವಸ್ಥಾನದ ಹೊಣೆ ಹೊತ್ತು, ಅಲ್ಲಿಯ ಕೆಲಸ ಮಾಡಿ, ಅಲ್ಲಿ ಬರುತ್ತಿದ್ದ ಮಕ್ಕಳಿಗೆ ಪಾಠ ಹೇಳಿಕೊಡ್ತಾ. ಹೊಲಿಗೆ ಕಸೂತಿ ಅಂತ ಹೇಳಿಕೊಡ್ತಾ ಬಂದ ಹಣದಲ್ಲಿ, ಹುಷಾರಿಲ್ಲದ ಗಂಡನನ್ನೂ ನೋಡ್ಕೋತ ಇದ್ದಳಂತೆ. ಅವಳ ಮಗಳನ್ನೂ ಕಾಲೇಜ್ ಮಾಡಿಸ್ತಾ ಇದ್ಲು.. ಮೊನ್ನೆ ಮೊನ್ನೆ ಮುಟ್ಟು ಮುಗಿದು ಸ್ನಾನ ಆಗಿ ದೇವಸ್ಥಾನಕ್ಕೆ ಹೋಗಿ ಬರ್ಬೇಕಾದ್ರೆ ಯಾರೋ ಮುತ್ತೈದೆ ಕೊಟ್ಟ ಮಲ್ಲಿಗೆ ಮುಡಿದು ಮನೆಗೆ ಬಂದಾಗ ಹುಷಾರಿಲ್ಲದ ಗಂಡನೂ ಸಹ ಒಮ್ಮೆ ಖುಷಿಯಾಗಿ. ಏನೇ ದೇವಿ ತರ ಕಾಣ್ತ ಇದಿಯಾ ಅಂದನಂತೆ. ನಾಗಮ್ಮ ಅದಕ್ಕೆ, ಯಾರೋ ಹೂ ಕೊಟ್ಟರು ಮೂಡಿದೆ ಅಷ್ಟೇ ಎಂದು ಸಾರಾ ಸಗಟಾಗಿ ಉತ್ತರಿಸಿದಳಂತೆ.

ಎಂದಿನಂತೆ ಪುಟ್ಟಿ ಅಮ್ಮನೊಂದಿಗೆ ಮಾತನಾದ್ಬೇಕು ಅಂತ ಮನೆಗೆ ಫೋನಾಯಿಸಿ, ಅಪ್ಪ ಅಮ್ಮನೊಂದಿಗೆ ಮಾತಾದಬೇಕು ಅಂದಾಗ.. ಅಪ್ಪ ಪುತ್ತಿಗೆ, ಅಮ್ಮ ಮನೆಯಲ್ಲಿಲ್ಲ ಬಂದ ಮೇಲೆ ಕಾಲ್ ಮಾಡಲು ಹೇಳ್ತೇನೆ ಅಂದಿದ್ದನಂತೆ.
ಆದರೆ ಸಂಜೆ ಮನೆಗೆ ಬಂದ ನಾಗಮ್ಮ, ಅಡುಗೆಗೆಲ್ಲ ತಯಾರೀ ಮಾಡಿ ಗಂಡನ ಮಂಚದ ಕೆಳಗೆ ಕುಸಿಡಳಂತೆ.. 'ರೀ, ಇನ್ನೂ ನಂಗಾಗಲ್ಲ. ಇನ್ನೂ ರಕ್ತ ತೆರುಕಾಗಲ್ಲ ಎಂದಾಗಲೇ ಗೊತ್ತಾದದ್ದು.. ಇವಳಿಗಾದ ಗಂಡಾಂತರ. ಖಾಯಿಲೆಯ ಗಂಡನೂ ಮೂರ್ಛೆ ಹೋಗಿ, ಇವಳು ತೆವಳಿಕೊಂಡು ಹೋಗಿ ಪಕ್ಕದವರನ್ನು ಕರೆದು, ಇಬ್ಬರೂ ಆಸ್ಪತ್ರೆಗೆ ಹೋಗುವಾಗ, ಆಸ್ಪತ್ರೆಯ ಗೇಟಿನ ಸಮೀಪದಲ್ಲಿಯೇ ನಾಗಮ್ಮನ ಪ್ರಾಣಪಕ್ಷಿ ಹಾರಿ ಹೋಗಿತ್ತಂತೆ.
ನಿನ್ನ ಅಪ್ಪನೂ ನೋಡಲು ಹೋಗಿದ್ದ ಅವಳನ್ನ.. ಅವಳ ಮಗಳು ವಿಷಯ ವಾರ್ಡ್ ಹತ್ತಿರ ಬಂದು ನೋಡಲು ಅವಳಪ್ಪಅಪ್ಪ ಡ್ರಿಪ್ ಚುಚ್ಚಿಸಿಕೊಂಡು ಒಂದು ಮೂಲೆಯಲ್ಲಿದ್ದರೆ, ನಾಗಮ್ಮನ ಕಳೇಬರ ಒಂದು ಮೂಲೆಯಲ್ಲಿತ್ತಂತೆ. ಅವಳನ್ನು ನೋಡಲು ಅದೆಷ್ಟೋ ಜನರಂತೆ. ಬಂದು ತಬ್ಬಿದ ಅವಳ ಮುದ್ದಿನ ಪುಟ್ಟಿ ಹೇಳಿದ ಕಡೆಯ ಮಾತು ಒಂದೇಯಂತೆ.. 

"ಅಮ್ಮಾ.. ನಿನ್ನೆಯಂತೂ ಫೋನಲ್ಲಿ ಮಾತಾಡಲಿಲ್ಲ.. ಇವತ್ತಾದರೂ ಮಾತಡಮ್ಮಾ. ನನ್ನೊಂದಿಗೆ ಮಾತಾಡೂಕೆ ಈಸ್ಟಾ ಇಲ್ಲವ? ಒಂದೇ ಒಂದು ಸಾರಿ ಮಾತಾಡಿ ಹೋಗಮ್ಮ.. ಒಂದೇ ಒಂದು ಸಾರಿ'.. ಕೇವಲ ಒಂದು ಸಾರಿ.."

ಇಷ್ಟು ಹೇಳಿ ಮುಗಿಸುವಾಗಲೇ ಅಮ್ಮನ (ಅಜ್ಜಿ) ವಯಸ್ಸಾದ ಕಣ್ಣುಗಳು ಹನಿಗೂಡಿದ್ದವು. ಅವುಗಳ ದಿಟ್ಟಿಸಿ ನೋಡುವ ಧೈರ್ಯವಿಲ್ಲದ ನಾನೂ ಮೇಲೆ ಇನ್ನೆಲ್ಲೋ ದಿಟ್ಟಿಸಿದ್ದೆ. ರೊಟ್ಟಿಯೂ ಸೀಡಿಹೋಗಿತ್ತು. ಮನಸ್ಸುಗಳೂ ಸಹ.

ಹೆಚ್ಚು ಹೊತ್ತು ಅಲ್ಲೇ ನಿಂತರೆ, ನಾನು ಎಲ್ಲಿ ಅತ್ತುಬಿಡುವೇನೋ ಎಂದು ಭಯಗೊಂಡು, ಪಕ್ಕದ ಕೋಣೆಗೆ ಧಾವಿಸಿದವನೆ ಕಿಟಕಿ ತೆಗೆದು ತುಂಬಿದ ಹಸಿರೆಡೆಗೆ ಕಣ್ಣು ಹಾಯಿಸಿದೆ. ಅದೆಷ್ಟೇ ದಿಟ್ಟಿಸಿಯೂ ಕಂಡದ್ದು ಕೊನೆಯಿಲ್ಲದ ದಿಗಂತ.. ದಶದಿಕ್ಕುಗಳಿಂದಲೂ 'ಅಮ್ಮ, ಒಂದು ಸಾರಿ ಮಾತಾಡಿ ಹೋಗಮ್ಮಾ' ಎನ್ನುವ ಮಾತುಗಳು ಹೃದಯ ಹಿಂಡಿದಂತಾಗುತ್ತಿತ್ತು.

ಭಾವನೆಗಳು ಉಕ್ಕೀದಾಗಲೇ ಬರೆಯಲು ಪ್ರೇರಣೆ ಬರುವುದು ಎಂಬ ಮಾತು ಸುಳ್ಳಲ್ಲ. ಸುಮ್ಮನಿರಲಾರದೇ, ಅಪ್ಪನ ಲೆಕ್ಕದ ಪುಸ್ತಕ ತೆಗೆದು ಬರೆಯುತ್ತಿರುವಾಗಲೇ ನಾಗಮ್ಮನ ಫೋಟೋ ನೋಡುವಾಸೆಯಾಯಿತು. ಅಮ್ಮನ ಕೇಳಲಾಗಿ, ಅಪ್ಪನ ಮದುವೆ ಆಲ್ಬಮ್ ನೋಡೆಂದಾಗ. ಬೀರು ತೆಗೆದು ಧೂಳು ಹೊಡೆದು ಅಮ್ಮ ಬಂದು ಫೋಟೋ ತೋರಿಸಿದಾಗ ಮನಕ್ಕೆ ಬಂದಿದ್ದು ಒಂದೇ ಸಂಗತಿ.






"ಛೇ.. ವಿಧಿಯೇ..ನೀ ಅದೆಷ್ಟು ಕ್ರೂರ..."



Friday, April 6, 2012

ಡಾರ್ಕ್ ಸರ್ಕಲ್ಸ್!!!

ಆದಾಗ ತಾನೆ ಆಫೀಸ್ ಲೀ ರಾತ್ರಿ ಊಟ ಮಾಡಿ ಮುಗಿದಿತ್ತು. ಸಹೋದ್ಯೋಗಿ ಮಿತ್ರರೊಂದಿಗೆ ಸಿಗರೇಟು ಬ್ರೇಕು.. ಆವ್ರು ಸೇದಬೇಕಾದ್ರೆ ನಾವು ಸುಮ್ನೇ ನೋಡ್ತಾ ಗಾಸಿಪ್ ಮಾತಾಡೋದು. ನಮ್ಮ ಗುಂಪಲ್ಲೊಬ್ಳು ಸುಂದರಿ. ಕಪ್ಪೆಯಂತೆ ಅವಳು ಯಾವಾಗ್ಲೂ ವಟಗುಟ್ತಾ ಇರ್ಲಿಲ್ಲ ಅಂದ್ರೆ ನಂಗೆ ಅವಳು ಯಾವಾಗ್ಲೋ ಈಸ್ಟಾ ಆಗೊವ್ಳೆನು. ಏನ್ಮಾಡೋದು ನಂಗೆ ನನಗಿಂತ ಜಾಸ್ತಿ ಮಾತಾದೋರು ಇಸ್ಟಾ ಆಗೋದಿಲ್ಲ!




ಸರಿ.. ನಮ್ಮ ಹುಡುಗ್ರೂ ಹೊಗೆ ಹಾಕ್ತಾ ಇದ್ರು.. ಇವಳು ಪಕ್ಕದಲ್ಲೇ ನಿಂತು ನಂಗೆ ಈ ಹೊಗೆ ಆಗಲ್ಲ, ನಂಗೆ ಮೈಗ್ರೇನ್ ಇದೆ ಗೊತ್ತಾ ಅಂತ ಕಿರೀ ಕಿರೀ ಮಾಡ್ತಾ ಇದ್ಲು. ತನಗೆ ರಜೆ ಕೊಟ್ಟಿಲ್ಲ ಮ್ಯಾನೇಜರ್ ಅಂತ ತುಂಬಾನೆ ಬೇಸರ ಆಗಿತ್ತು ಕಾಣುತ್ತೆ ಹುಡುಗಿಗೆ.

ನಾನು: ಸರಿ.. ಎಸ್ಟ್ ವರ್ಷದಿಂದ ಮೈಗ್ರೇನ್?
ಅವಳು: ಸುಮಾರು ಎರಡು ವರ್ಷದಿಂದ..
ನಾನು: ನಂಗೂ ಐದು ವರ್ಷಗಳ ಹಿಂದೆ ಇತ್ತು. ನಾನು ಕಣ್ಣ ಪರೀಕ್ಷೆ ಮಾಡ್ಸಿ ಡಾಕ್ಟರು ಕನ್ನಡಕ ಕೊಟ್ಟಿದ್ರು. ಈಗ ಸರಿ ಹೋಗಿದೆ. ನೀನು ಮೊದಲು ಹೋಗಿ ಡಾಕ್ಟರಿಗೆ ತೋರಿಸು.
ಅವಳು: ಅಯ್ಯೂ.. ಹಾಗೆಲ್ಲಾ ತೋರಿಸಿ ಕನ್ನಡಕ ಹಾಕೊಂಡ್ರೆ 'ಡಾರ್ಕ್ ಸರ್ಕಲ್ಸ್' ಆಗಲ್ವಾ? ಅಯ್ಯೋ ಅದೆಲ್ಲ ಬೇಡಪ್ಪ ಬೇಡ...
ನಾನು: ಸರಿ.. ಒಂದ್ ಪ್ರಶ್ನೆ ಕೇಳೋದಾ?
ಅವಳು: ಸರಿ.. ಕೇಳು..
ನಾನು: ನಿಂಗೆ ಆರೋಗ್ಯ ಮುಖ್ಯಾನ ಅಥವಾ ಸೌಂದರ್ಯ?
ಅವಳು: ನಂಗೊತ್ತಿಲ್ಲ.. ಆದ್ರೆ ನಂಗೆ ಡಾರ್ಕ್ ಸರ್ಕಲ್ಸ್ ಮಾತ್ರ ಬೇಡಪ್ಪ!!!
ನಾನು: ತತ್.. ನನ್ನ್ ಜನ್ಮಕ್ಕೆ!!! ಈ ಸುಂದರವಾದ ಹುಡ್ಗೀರ್ ಬುದ್ಧಿನೆ ಇಸ್ಟಾ?

ದೇವ್ರು.. ನಂಗೆ ಸೂಪರ್ ಬ್ಯೂಟಿ ಸಿಗದಿದ್ರೂ ಓಕೇ.. ಇಂಥ ನಾನ್ಸೆನ್ಸ್ ಬೇಡ ತಂದೆ.. ಬೇಡ!!!

Sunday, March 18, 2012

ಮನ ತುಂಬಿ ಬಂದಾಗ..


ಅಂತಃ ಕರಣ..















ಲಗಾಮಿಲ್ಲದೇ ಓಡಿತು ಮನವು ಹುಚ್ಚು ಕುದುರೆಯಂತೆ..
ನಾ ನಿನ್ನ ನೋಡಿದ ಕ್ಷಣದಿಂದಲೇ..
ಅದೇನು ಮಾಡಿದೆ ನೀನು, ನಿಲ್ಲದಾಯಿತು ನನ್ನೀ ಮನ..
ಹಳಿದೆ,ಹಂಗಿಸಿದೆ,ಬೇಗುದಿಯಲಿ ಬಸವಳಿದೆ..
ಕೊನೆಗೊಮ್ಮೆ ಕೇಳಿದೆ ಮನಕೆ, ಹೇಳು ನಿನಗೆ ನಾ ಬೇಕೋ ಅವಳೋ..
ಇದೇನು ಮರುಳು, ಮನವೆಂದಿತು ನನಗವಳೇ ಸನಿಹ ನೀ ಅಲ್ಲ ನಲ್ಲ..
ನಕ್ಕೆ ನಾ ತುಟಿಯಂಚಲಿ, ಹೇಳಿದೆ ಮನಕೆ,

"ಹೇ... ಹುಚ್ಚು ಕುದುರೆಯೇ, ತಪ್ಪು ಮಾಡಿದೆ ನಾ ನಿನಗೆ ನೀಡಿ ಸ್ವಾತಂತ್ರವ. ...
ಹೊಡೆದು ಕೊಲ್ಲುವೆನಿನ್ನ ಅರ್ಥವಿಲ್ಲದ ವ್ಯರ್ಥ ಪ್ರಯತ್ನವ..
ಕಟ್ಟುವೇ ನಿನ್ನ ನನ್ನ ಎದೆ ಕಂಬಕೆ ಎಂಜಲ ತಿನ್ನುವ ನಾಯಿಯಂತೆ..
ಬಡಿದು ತಿದ್ದುವೆ ಮನೆ ಹಿಂದೆ ಮೇಯುವ ಪೋಲಿ ಗೂಳಿಯಂತೆ..
ಮತ್ತೆ ಜನಿಸುವೆ.. ಮತ್ತೆ ಮೆರೆಯುವೆ.. ಮತ್ತೆ ಹುಟ್ಟುವೇ ನಾ ನಾನಾಗಿ..
ನನಗಾಗಿ.."

Friday, March 16, 2012

ಕೆರಿಯಪ್ಪನ ಕಥೆ..


ಅರೆರೆ.. ಭಲೇ ಚಾಲಾಕಿ ಆಗ್ಬಿಟ್ವೂ ಬಿಡ್ರೀ ಈಗಿನ ನಾಯಿಗಳು.. ಯಾಕಪ್ಪಾ ಇದ್ಕಿದ್ದಹಾಗೆ ಈತ ನಾಯಿ ಕಥೆ ಹೇಳೋಕ್ ಶುರು ಹಚ್ಕೋತಾ ಇದಾನೆ ಅಂದ್ಕೊಂಡ್ರಾ?



ಸುಮ್ನೇ ಸುಮ್ನೇ ಯಾರಾದ್ರೂ ಬರೀತಾರ? ನೀವೇ ಹೇಳಿ. ಇವತ್ತು ಬರ್ಯೋಕೆ ಸ್ಪೂರ್ತಿ ಕೊಟ್ತೊನೆ ನಮ್ ಏರಿಯ 'ಕೆರಿಯಪ್ಪ'. ಅವನ ಹುಟ್ಟು ಹೆಸ್ರು ಗೊತ್ತಿಲ್ಲ.. ತೇಟ್ ನಮ್ಮ ಕನ್ನಡ ಫಿಲ್ಮ್ ಹೀರೊ ತರ. ನೆನ್ಸ್ಕೊಳಿ ಒಮ್ಮೆ ನಮ್ಮ ಕನ್ನಡ ಚಿತ್ರಗಳ್ನ. ಹೀರೋ ಎಲ್ಲಿ ಹೋದ್ರೂ ಅನಾಥ.. ಪಾಪ ಅವ್ನ್‍ಗೆ ಅವನ ಹೆಸ್ರೂ ಕೂಡ ಗೊತ್ತಿರೋದಿಲ್ಲ.. ಆಮೇಲೆ ಅವ್ನಿಗೆ ಇನ್ಯಾರೋ ಹೆಸರಿಡ್‌ತಾರೆ. ಹೆಸರೀಡೋಕೂ ಒಂದು ಕಾರಣ ಬೇಕಲ್ವಾ? ಆ ಕಾರಣನೆ ಇವತ್ತಿನ್ ಕಥೆ, ಅದೇ ಇವತ್ತಿನ ಹೈ ಲೈಟ್!!!

ಕೆರಿಯಪ್ಪ ಮೊದ ಮೊದಲ್ಗೆ ತುಂಬಾ ಸಭ್ಯಸ್ಥ. ಯಾರ್‍ಗೂ ಏನೂ ತೊಂದ್ರೆ ಕೊಡದ ಆಸಾಮಿ. ಸುಮ್ನೇ ಬೇಕರಿ ಎದುರ್ಗೆ ಕೂತು ಆವ್ರು ಇವ್ರು ತಿನ್ನೋ ತಿಂಡಿನ ನೋಡ್ತಾ ಕೂತ್ಬಿಡೋದು. ಯಾರಾದ್ರೂ 'ಅಯ್ಯೋ ಪಾಪ' ಆನ್ಸಿ ಒಂದ್ ಪೀಸ್ ಹಾಕಿದ್ರೆ ಅದನ್ನ ತಿಂಡ್ಬಿಟ್ಟು ಕಣ್ಣಲ್ಲೇ ಒಂದ್ ಥ್ಯಾಂಕ್ಸ್ ಹೇಳೋ ಹ್ಯಾಂಡ್‌ಸಮ್ ಹೀರೊ. ಪಾಪ ಅವನಿಗೂ ಇತ್ತೀಚೆಗೆ ಲೈಫ್ ಬೋರ್ ಆಗ್ಬಿಟ್ಟಿದೆ. ಇತ್ತೀಚೆಗೆ ಯಾವಾಗ್ಲೋ ಒಮ್ಮೆ ಟೀವೀಲೀ ಅನಿಮಲ್ ಪ್ಲ್ಯಾನೆಟ್ ಡಿಸ್ಕವರೀ ಲೀ ಫನ್ನಿಯೆಸ್ಟ್ ಅನಿಮಲ್ ಪ್ರೋಗ್ರಾಮ್ ನೋಡ್ಬಿಟ್ಟ ಅನ್ಸುತ್ತೆ. ಅದೇ ತರ ಆಡೋಕೆ ಶುರು ಹಚ್ಕೊಂಡ. ಏನಂತೀರಾ?!! ಅದೇ ರೀ ಕಾಲೆತ್ತೋಡು ತಿಂಡಿ ಇಟ್ಕೊಂಡೋರ್‌ನ ತಿಂಡಿ ಕೊಡೋವರೆಗೂ ಕೆರಿಯೋದು!!!!



ಹೀಗೆ ಕೆರಿಯಪ್ಪ ಮಾಡಿದಾಗೆಲ್ಲ ಜನ್ರೂ ಫುಲ್ಲ್ ಖುಷ್. "ನೋಡ್ರೀ ಈ ನಾಯಿ ಎಸ್ಟ್ ಚೆನ್ನಾಗ್ ಕೆರಿಯುತ್ತೆ". "ಏ ಶಂಕ್ರ, ಕೊಡೋ ಎರಡು ಬಿಸ್ಕೆಟ್ ಈ ಕಡೆ, ನಾಯಿ ಯಾಕೋ ಬೋ ಕೆರತೈತೆ. ತಡಯಾಕ್ ಆಗ್ತಾ ಇಲ್ಲ."

ವಿಧ ವಿಧವಾದ ಮಾತುಗಳ ನಡುವೆ ಮಜಾ ಮಾಡಿದವನೇ ನಂ ಕೆರಿಯಪ್ಪ. ತಿಂದ ತಿಂದಾ.. ತನ್ನ ಪಾಪ್ಯುಲಾರಿಟಿ ನೂ ಜಾಸ್ತಿ ಮಾಡ್ಕೊಂಡ.. ಲೈಫು ಫುಲ್ಲ್ ಖುಷ್ ಆಗಿ ಹೋಗ್ತಾ ಇರ್ಬೇಕಾದ್ರೆ ಒಂದಿನ...

ಇಂಟರ್‌ವ್ಯೂ ಅಂತ ಖುಶಿಲಿದ್ದ ನಂ ಸಿದ್ಧ.. ಬಿಳಿ ಪ್ಯಾಂಟು ಷರ್ಟು ಧರಿಸಿ ಪ್ರಪಂಚ ಗೆಲ್ಲೋಕೂ ಆತ ಸಿದ್ಧ. ಪ್ರಶ್ನೆಗಲ್‍ನೆ ಉತ್ತ್ರ ಮಾಡಿಕೊಳ್ಳೊದಾಗಿ ಊಹಿಸಿದ್ಧ.. ಆಗ್ಲೇ ಸ್ವಲ್ಪ ಮಳೆ ಬಂದಿತ್ತು. ಮಳೆ ಬಂದಾಗ ಬೆಂಗಳೂರು ಹೆಂಗಿರುತ್ತೆ ಅಂತ ಕೇಳ್ಬೇಕಾ? ಹನಿಮೂನ್ಗೆ ಸಿದ್ಧ ಆಗಿರೋ ಜೋಡಿ ಹಾಗೆ.. ಸಿದ್ಧಂಗು ಒಂದು ಚಾ ಮತ್ತೆ ಒಂದು ವೆಜ್ ಪಫ್ ಆಸೆ ಆಯ್ತು ಅನ್ಸುತ್ತೆ..
ಹ್ಮ್.. ಫುಲ್ಲ್ ಟಿಪ್ ಟಾಪ್ ಆಗಿ ಬಂದವ್ನೇ ಸಿದ್ಧ ಶಂಕ್ರನ ಬೇಕರಿ ಗೆ ಒಂದು ಚಾ ಹಾಕ್ಕೊಂಡ್ ಹೋಗೋಣ ಅಂತ ಬಂದ. "ಶಂಕ್ರ, ಒಂದು ಒಳ್ಳೇ ಖಡಕ್ ಚಾ ಮತ್ತೆ ಒಂದು ಪಫ್ಫು ಕೊಡೋ" ಅಂತ ಹೇಳಿದ್ದೆ ತಡ, ಅಲ್ಲೇ ಇದ್ರೂ ನೋಡ್ರೀ ನಮ್ಮೆರೀಯ ಹೀರೋ. ಬಂದ್ರಪ್ಪ ಬಂದ್ರೂ ಜೋಧಾ ಅಕ್ಬರ ಲೀ ನಂ ಹ್ರಿತಿಕ್ ರೋಷನ್ ತರ ಕೆರಿಯಪ್ಪ..  ಜಿಂಗಾಲಾಲ.. ಸಿದ್ಧನ ಕೈಲಿ ತಿಂಡಿ ನೋಡಿದ ಖುಷಿಯಲ್ಲಿ ಅವನ ಉಜಾಲ ಹಾಕಿದ ಬಿಳಿ ಪ್ಯಾಂಟ್ ಮೇಲೆ ತಮ್ಮ ಚಿನ್ನದ ಬಣ್ಣದ ಕೆಸರು ತುಂಬಿದ ಪಂಚ ನಖಗಳಿಂದ?! ಹ್ಮ್.. ಅದ್ನೆ ಮಾಡಿದ್ದು..

ಪಾಪ ದೇವೇಗೊವಡ್ರಾಗಿದ್ರೆ ಮಣ್ಣಿನ ಮಗ ಅಂತ ಸುಮ್ನೇ ಆಗಿರೋರು ಅನ್ಸುತ್ತೆ.. ಸಿದ್ಧ ಅಲ್ವಲ್ಲ!! ಪಾಪ ಅವ್ನಿಗೆ ಗೊತ್ತೂ ಆಗ್ಲಿಲ್ಲ..

ಮುಂದಿನ ಕಥೆ.. ?!! ಹೀಗೂ ಉಂಟೆ..!!!!   ಅದೇ.. ನೀವು ಅಂದ್ಕೊಂಡ ಹಾಗೆ..!!!



(ಗಮನಿಸಿ: ಚಿತ್ರದಲ್ಲಿರುವುದು ಒರಿಜಿನಲ್ ಕೆರಿಯಪ್ಪ ಆಗಿರುವುದಿಲ್ಲ. ನಿಜವಾದ ಚಿತ್ರ ಸಿಕ್ಕಾಗ ಬಿಂಬಿಸಲಾಗುವುದು)




Thursday, February 23, 2012

ಪ್ರೀತ್ಯಾ ಸಂಸ್ಕೃತಿ..


ಸ್ನೇಹದಲ್ಲಿ ಅಡ್ಡಿಯಾಗದ ಜಾತಿ ಮತ ಪ್ರೀತಿಯ ಮಧ್ಯೆ ಮಾತ್ರ ಏಕೆ ಚೀನಾದ ಮಹಾಗೊಡೆಯಾಗಿ ನಿಲ್ಲುತ್ತದೆ?! ಭಾರತೀಯ ಸಮಾಜವೇ ವಿಶ್ವದ ಏಳು ಅದ್ಬುತಗಳಲ್ಲಿ ಮೊದಲನೆಯದು.. ಅಲ್ವಾ?
ಒಟ್ಟಿಗೆ ಓದುತ್ತೇವೆ, ಬರೆಯುತ್ತೇವೆ, ಕಲಿಯುತ್ತೇವೆ, ಕಳಿಸುತ್ತೇವೆ.. ಸ್ನೇಹ ಎನ್ನುವ ಸೇತುವೆ ಎರಡು ಎದೆಗಳ ನಡುವೆ ಕಲ್ಲು ಮಣ್ಣು ನೀರಿಲ್ಲದೇ ಉದ್ಭವವಾಗುವ ಕ್ರಿಯೆಯಂತೂ ಅತಿ ಸೋಜಿಗವಾದುದು. ಸ್ನೇಹದಿಂದ ಶುರುವಾದ ಸೇತುವೆ ಹಲವು ಬಾರಿ ಸ್ನೇಹವಾಗಿ ಉಳಿಯಬಹುದು, ಉಳಿಯದೆ ಸಹ ಇರಬಹುದು. ಉಳಿಯದೆ ಇರುವ ಸ್ನೇಹ ಅಂತ್ಯದಲ್ಲಿ ಪ್ರೀತಿಯಾಗಿ ಬದಲಾಗುವುದಾದರೂ ಹೇಗೆ? ಹೇಗೆ? ಹೇಗೆ?



ಅದೆಷ್ಟು ಸಾರಿ ಕೇಳಿಗೊಂಡರೂ ಉತ್ತರ ಸಿಗುವುದಿಲ್ಲ ಅಲ್ಲವೇ..? ಅದೇ ಕಣ್ರೀ ಮನಸ್ಸೆಂಬ ಮಾಯಾಲೋಕ.. ನಮ್ಮ ಮಾತು ಅದು ಕೇಳೋ ಹಾಗಿದ್ದಿದ್ರೆ ಅದೆಷ್ಟು ಚೆನ್ನಾಗಿತ್ಟಲ್ವೇ?

ಅನ್ಯ ದೇಶೀಯ ಸಂಸ್ಕೃತಿಗಳನ್ನ ಹೆಚ್ಚಾಗಿ ನೋಡಿದಾಗ ಅಲ್ಲಿ ಪ್ರೀತಿಗೆ, ಅಥವಾ ಪ್ರೀತಿಯೆಂದೆರ್ಪಟ್ಟ ಮದುವೆಗೆ ಸಾಮಾನ್ಯವಾಗಿ ಒಪ್ಪಿಗೆಇರುತ್ತದೆ. ಆದರೆ ಭಾರತೀಯ ಸಂಸ್ಕೃತಿಯೆಕೆೀದಕ್ಕೆ ಸ್ಪಂದಿಸುವುದಿಲ್ಲ ಅಂತ ಯಾರಿಗೂ ಅನಿಸುವುದಿಲ್ಲವೇ. ನಾ ಪ್ರೀತಿಗೆ ಬಿದ್ದು ಈ ಮಾತನ್ನು ಹೇಳ್ತಾ ಇಲ್ಲ. ಒಬ್ಬ ಗೆಳೆಯನಿಗೆ ಗೆಳೆಯನಾಗಿ  ಈ ಮಾತು ನನ್ನ ಕಾದಿದ್ದಂತೂ ನಿಜ.

ಹೀಗೆ ಊಟದ ಸಮಯದಲ್ಲಿ ಸಹೋದ್ಯೋಗಿಯೋರ್ವ ಆತನ ಆರು ವರ್ಷಗಳ ಪ್ರೀತಿ ಕಮರಿ ಹೋಗುತ್ತೀರೋ ರೀತಿಯನ್ನು ತನ್ನದೇ ಗುಂಗಿನಲ್ಲಿ ಬಣ್ಣಿಸುತ್ತಿದ್ದ ಕ್ಷಣದಲ್ಲಿ ನಾ ಅಲ್ಲಿರಲಿಲ್ಲ. ಮುಂದಿನ ಆಗು ಹೋಗುಗಳ ಮನಸ್ಸಿನ ಕಸಿವಿಸಿಗಳ ನೋವಿನ ಕೆಸರಿನ ಲೋಕದಲ್ಲಿ ಸಿಕ್ಕಿಕೊಂಡಿದ್ದೆ.




ಪ್ರೀತಿಯೇ ಹಾಗೆ.. ನೊಂದಷ್ಟು ಸಹ ನೋಯಿಸುವುದು.. ಬಡ್ಡಿ ಮಗಂದು ಎಷ್ಟು ಮಾಡಿದರೂ ಸಹ ಬೇಡ ಅನಿಸೋದಿಲ್ಲ.. ನೋಯಿಸಿದರೂ ಸಹ ಎರಡು ಪೆಗ್ ವ್ಯಾಟ್ ೬೯ ಗಿಂತ ತಲೆ ಹಿಡಿಸುತ್ತದೆ. ಅದ್ರಲ್ಲಿ ಒಂದು ದಿನ ಕಿಕ್ಕಾದ್ರೆ, ಇದ್ರಲ್ಲೇ ಕ್ಷಣ ಕ್ಷಣವೂ ಸಹ.

ಇಷ್ಟೆಲ್ಲಾ ಪ್ರೀತಿಗೆ ಶಕ್ತಿ ಇದ್ದರೂ ಸಹ, ಪ್ರೀತಿಸಿದವರೊಂದಿಗೆ ಮಾತ್ರ ಯಾಕೆ ನಮ್ಮ ನಮ್ಮ ಸಮಾಜ ಬಾಳಲು ಬಿಡುವಿದಿಲ್ಲ? ಹುಡುಗನಿಗೆ ಒಳ್ಳೇ ಕೆಲಸವಿಲ್ಲ, ಹುಡುಗಿಯನ್ನು ಸಾಕುವ ಶಕ್ತಿ ಇಲ್ಲ ಅಂದರೆ ಅದು ಒಪ್ಪುವಂತಹ ಮಾತು. ಆದರೆ ಗುಣ ಹಣಗಳ ಹಣೆಬರಹ ಸರಿಯಾಗಿದ್ದೂ ಸಹ ಈ ಮನಸ್ಸಿನ ವ್ಯಾಕುಲವೇಕೆ? ಯಾಕೆ ಅಂತ?

ಭಾರತೀಯ ಸಂಸ್ಕೃತಿ ಪ್ರಪಂಚದಲ್ಲಿಯೇ ಅತ್ಯುಚ್ಚವಾದುದು ಅಲ್ಲವೇ? ಇದನ್ನು ಯಾರು ಸಹ ಇಲ್ಲ ಎನ್ನಲಾರ್. ಯಾರೋ ಪಾಸ್ ಪೋರ್ಟ್ ಇಲ್ಲದ ಹೊರಗಿನವ ಇಲ್ಲೇ ಬಂದು ಅದೆಷ್ಟು ಜನರಿಗೂ ಯಾರೂ ಸಹ 'ಏನಪ್ಪಾ, ನೀ ಎಲ್ಲಿಯವ? ಎಷ್ಟು ದಿನ ಇರುವೆ' ಎಂದು ಸಹ ಕೇಳದ ನಾವು, ಕಸಬ್ ನಂಥ ದುಷ್ಟರಿಗೂ ಸಹ ಮೂರು ಹೊತ್ತು ನಮ್ಮ ದೇಶದ ಮಣ್ಣು ತಿಂದ ಕುರಿಗಳ ಮಟನ್ ಬಿರಿಯಾನಿಯ ಬಡಿಸುವ ನಾವು, ನಮ್ಮವರ ಪ್ರೀತಿಗೆ ಮಾತ್ರ ಯಾಕೆ ಮುಳ್ಳಿನಂತೆ ಅಡ್ಡ ನಿಂತುಬಿಡುತ್ತೇವೆ? ಭಾರತೀಯತೆಯನ್ನೇಕೆ ಸ್ಪಂದಿಸುವುದಿಲ್ಲ?

ಒಟ್ಟಿಗೆ ಊಟ,ಆಟ,ಪಾಠ ಆಡಿದವರನ್ನು ಸಹ ಪ್ರೀತಿ ಎಂದಾಗ ಅದೆಷ್ಟು ತಂದೆ ತಾಯಿ ಯಾಕೆ ನಂಬುವುದಿಲ್ಲ?

ಸಂಸ್ಕೃತಿ ನಮ್ಮ ನಡೆ ನುಡಿಯಲ್ಲಿರುವಂತಹುದು, ನಮ್ಮ ಹಾವ ಭಾವದಲ್ಲಿರುವಂತಹುದು. ಸಂವಿಧಾನದಲ್ಲಿ ಎಲ್ಲರೂ ಒಪ್ಪಿ ಮಸೂದೆಯನ್ನು ಅಂಗೀಕರಿಸುವಂತೆ ಪ್ರೀತಿಗೂ ಸಹ ಒಂದು ಮಸೂದೆ ಬೇಕೇ? ನಮ್ಮ ಮನಸ್ಸಿನ ಒಪ್ಪಿಗೆ ಸಾಕಾಗುವುದಿಲ್ಲವೇ?

ನಂಬಿಕೆಯೇ ದೇವರು.. ಅದರ ಮುಂದೆ ಎಲ್ಲವೂ ಸೊನ್ನೆ. ನಮ್ಮ ಸಮಾಜ ಪ್ರೀತಿಗೆ ಒಪ್ಪುವುದಿಲ್ಲ ಎಂದರೆ ಅದು ನಂಬಿಕೆಯ ಪ್ರಶ್ನೆಯೇ. ಪ್ರೀತಿಗೆ ಒಪ್ಪದ ಸಮಾಜ ಸ್ನೇಹ ಇದ್ದಾಗ ಯಾಕೆ ಪ್ರಶ್ನಿಸುವುದಿಲ್ಲ? ಇದನ್ನ ಯಾಕೆ ನಾವೂ ಸಹ ಪ್ರಶ್ನಿಸುವುದಿಲ್ಲ?

ಮರದಂತೆ ಬೆಳೆಯಲು ಬಿಟ್ಟು, ಆಮೇಲೆ ಕಡಿಯುವುದಕ್ಕಿಂತ, ಗಿಡವಾದಾಗಲೇ ಚಿವುಟುವುದು ಅದೆಷ್ಟೋ ವಾಸಿ ಅಲ್ವಾ?

ಇನ್ನಾದರೂ ನಮ್ಮ ತಂದೆ ತಾಯಿಯರು, ಸಂದರ್ಭಕ್ಕೆ ತಕ್ಕಂತೆ ನಿರ್ಧರಿಸುವರೆಂದು ನನ್ನ ನಂಬಿಕೆ! ಪ್ರೇಮಿಗಳನ್ನ ಆ ದೇವರೇ ಕಾಪಾಡಲಿ!

Friday, January 27, 2012

ಬೆತ್ತಲೆ ಪ್ರಪಂಚ..

ಸಮಯ ೫:೧೨ ಮುಂಜಾನೆ. ಆಫೀಸಿಂದ ಬಂದು ಆಗ್ಲೇ ಒಂದು ಘಂಟೆ ಕಳೆದು ಹೋಯ್ತು.. ಟೀವೀ೯ ಲೀ ಬರೋ ವಾರೆಂಟ್ ಕಾರ್ಯಕ್ರಮ ನು ಮುಗಿದಾಯ್ತು. ಇನ್ನೂ ನಿದ್ದೆ ಬರ್ತಾ ಇಲ್ಲ. ಕಳೆದ ಒಂದು ವರ್ಷದ ಸಮಯದಲ್ಲಿ ಕಳೆದ ಬಣ್ಣದ ಚಿತ್ರಗಳ್ನ ಒಮ್ಮೆ ತೆಗೆದು ಇಣುಕಿ ನೋಡೋ ಆಸೆ ಆದ್ರೆ ಯಾಕೋ ಮನಸ್ಸೇ ಬರ್ತಾ ಇಲ್ಲಾ. ಇತ್ತೀಚಿಗೆ ಯಾಕೋ ಒಂದು ಕೊಲೆ ನೋಡದೇ ಇದ್ರೆ ಊಟ ನಿದ್ದೆ ಎರಡೂ ಸಹ ಮೈಗೆ ಹತ್ತೋದೆ ಇಲ್ಲಾರೀ.





ಕೊಲೆನಾದ್ರೂ ಸರಿ.. ಈಸ್ತೊಂದು ದಿನ ಕೊಲೆ ನೋಡ್ಕೊಂಡೆ ಮಲ್ಗ್ತಾ ಇದ್ದೆರೀ.. ಆದ್ರೆ ಈ ಎರಡು ದಿನಗಳಿಂದ ಬರೀ ರೇಪು.. ಅಡ್ರದ್ದೇ ದೃಶ್ಯವೈಭವ. ನಿನ್ನೆ ಸಂಚಿಕೆಯಲ್ಲಿ ಅದ್ಯಾವ್ದೋ ಇಪ್ಪತ್ತರ ಹರೆಯದ ಹುಡುಗ ಎಪ್ಪತ್ತರ ಹರೆಯದ ಅಜ್ಜಿನ ಅತ್ಯಾಚಾರ ಮಾಡಿದನಂತೆ, ಇವತ್ತು ಇಪ್ಪತ್ತರ ಹರೆಯದ ಮುಗ್ಧ ಬುದ್ಧಿಮಾಂದ್ಯೆಯ ಎಪ್ಪತ್ತರ ಹರೆಯದ ಮಾಜಿ ಮೇಷ್ಟ್ರು ಹಾಳು ಮಾಡಿದನಂತೆ. ಪ್ರಪಂಚ ಯಾಕೆ ಹೀಗಾಗ್ತಾ ಇದೆ ಅಂತ ಇದೆ ಪ್ರಶ್ನೆಯನ್ನ ಸ್ನೇಹಿತರಿಗೆ ಕೇಳೋಣ ಅಂದ್ರೆ ಆವ್ರು ಆಮೇಲೆ ಅದ್ನೆ ದೊಡ್ಡ ವಿಷ್ಯ ಮಾಡ್ಕೊಂಡ್ ನನ್ನ ಮರ್ಯಾದೆಯನ್ನೇ ತೆಗಿತಾರೆ ಆನೊ ಭಯ.. ಸ್ನೇಹಿತರೆ ಹಾಗೆ ಬಿಡಿ. ಸೀರಿಯಸ್ ವಿಷ್ಯ ಆಗ್ಲೀ.. ತಮಾಷೆ ಆಗ್ಲೀ.. ಅದು ತಮಾಷೆ ಮಾತ್ರ:)

ಅದೆಷ್ಟೋ ಜನ ವಿಜ್ಞಾನಿಗಳು, ಜ್ಯೋತಿಷಿಗಳು,ವಿಚಾರವಾಡಿಗಳು ೨೦೧೨ ಪ್ರಪಂಚದ ಪತನ ಅಂತ ಬರೆದಿರೋದು ಸತ್ಯ ಅಂತ ಅನ್ಸುತ್ತೆ.. ಅದು ಅವ್ರೆ ಹೇಳಿದ ಹಾಗೆ ವೈಜ್ಞಾನಿಕವಾಗಿ ಬೃಹತ್ ಹಿಮಪರ್ವತಗಳು ಕರಗಿ, ಜ್ವಾಲಾಮುಖಿ ಆಗಿಯೋ ಅಥವಾ ಭೂಕಂಪ ಆಗಿಯೋ ಆಗುತ್ತೋ ಬಿಡೊತ್ತೋ ಅನ್ನೋದು ಊಹೆ ಮಾತ್ರ.  ಮನುಷ್ಯ ತನ್ನ ಮಾನವೀಯತೆಯನ್ನ ಕಳ್ಕೊಂಡು ಇಂತಾ ಹೇಯ ಕೃತ್ಯಗಳ್ನ ಯಾವಾಗ ಮಾಡೋಕೆ ಶುರು ಹಚ್ಕೊತಾನೋ ಆವಾಗ್ಲೇ ಶುರುಕಂಡ್ರಿ ಪ್ರಪಂಚದ ಪತನ.. ಇದು ಅಕ್ಷರಶಃ ಸತ್ಯ.




ದೇವತೆಗಳು ದಾನವರು ಇಬ್ರೋ ಅಮೃತಕ್ಕೋಸ್ಕರ ಹೊಡೆದಾಡಿದ್ರಂತೆ. ಇಬ್ರಿಗೂ ಬೇಕಾದದ್ದು 'ಅಮೃತ'.. ಎಲ್ಲರಿಗೂ ಐಷಾರಾಮಿ ಜೀವನ ಬೇಕು.. ಮಜಾ ಮಾಡ್ಬೇಕು.. ಬರೀ ಖುಷಿ ಬೇಕು. ಬೇರೆ ಯಾವುದು ಬೇಡ!!

ಹಿರಿಯರು, ಹಳೆ ಸಿನಿಮಾಗಳು ಇದೊಂದು ಡೈಲೋಗ್ ನ ಅದೆಷ್ಟು ಸಾರಿ ಹೇಳಿದರೋ ಅದಕ್ಕೆ ಲೆಕ್ಕವೇ ಇಲ್ಲ. "ಮರಿ, ಹೆಣ್ಣು-ಹೊನ್ನು-ಮಣ್ಣು ಈ ಮೂರಕ್ಕೋಸ್ಕರ ನೀ ಯಾವಾಗ ದುರಾಸೆ ಪಡುತ್ತೀಯೋ, ಅವತ್ತೇ ನಿನ್ನ ಅಂತ್ಯದ ಮೊದಲ ಹೆಜ್ಜೆ' ಅಂತ. ಮನುಷ್ಯ ಹುಟ್ಟಬೇಕಾದ್ರೆ ಹೆಣ್ಣಿನೊಂದಿಗೆ ಹುಟ್ಟುವ.. ಮಣ್ಣಿನಲ್ಲೇ ಆಡುವ (ಸಿಟಿ ಬೇಬಿ ಲೈಫು ಬೇರೆ ಬಿಟ್ಬಿಡಿ!).. ಆದ್ರೂ ಯಾಕೆ ಬುದ್ಧಿ ಬೆಳೆದಮೇಲೆ ಮಾತ್ರ ಈ ವಿಚಾರದಲ್ಲಿ ದಡ್ದನಾಗ್ತಾನೇ ಅಂತ!

ಬಹುಷ್ಯ ಆ ಹೊನ್ನಿನ (ಲಕ್ಷ್ಮಿ ಕಟಾಕ್ಷದ) ಕೃಪೇಯೇ ಇದಕ್ಕೆಲ್ಲ ಕಾರಣ ಅನ್ಸುತ್ತೆ. ಹಣ ಬಂದ ಹಾಗೆ ಮತ್ತೆ ಅವನಿಗೆ ಅದಕ್ಕೆ ಸರಿಯಾಗಿಯೋ ಮಣ್ಣು (ಭೂಮಿ) ಬೇಕು.. ಭೂಮಿಯಲ್ಲಿ ಮಜಾ ಮಾಡೋಕೆ ಒಂದು ಹೆಣ್ಣು ಬೇಕು.. ಏನ್ಸಾರ್ ಈ ಲೈಫು.

ಆಫೀಸಲ್ಲಿ ಸಹೋದ್ಯೋಗಿ ಜೊತೆಗೊಮ್ಮೆ ಊಟಕ್ಕೆ ಕುಳಿತಾಗ ಟೀವೀ ಯಲ್ಲಿ ಭಾರತೀಯ ವಿದ್ಯಾರ್ಥಿಗಳು ಲೆಕ್ಕ ಮತ್ತು ಓದಿನ ವಿಚಾರದಲ್ಲಿ ಈ ವರ್ಷದ ಸಾಲಿನಲ್ಲಿ ಹಿಂದೆ ಇದ್ದಾರೆ ಅನ್ನೋ ವಿಷ್ಯಾನ ಹೇಳ್ತಾ ಇದ್ರು. ಅದನ್ನ ನೋಡಿ ಬೇಜಾರಾಗಿ ಸಹೋದ್ಯೋಗಿಗೆ, "ನಾವು ಇದ್ರಲ್ಲಿ ಹೇಗೆ ಬದಲಾವಣೆ ತರಬಹುದು"? ಅಂತ ಕೇಳಿದ್ಕೆ ನನಗೆ ಆತ ನೀಡಿದ ಉತ್ತರ ಸಿಕ್ಕಾಪಟ್ಟೆ ಬೇಜಾರು ಮಾಡ್ತು. ಆತ ಹೇಳಿದ್ದು, "ರೀ ರಕ್ಷಿತ್, ಸುಮ್ನೇ ಊಟ ಮಾಡಿ.. ಇದನ್ನ ನೀವು ಸರಿ ಮಾಡಿದ್ರೆ, ನಿಮ್ಮ ಸಂಬಳದ ಟ್ಯಾಕ್ಸ್ ಏನಾದ್ರೂ ಕಮ್ಮಿ ಆಗುತ್ತಾ? ದೇಶದ ಬಗ್ಗೆ ನಾವ್ಯಾಕೆ ತಲೆ ಕೆಡ್ಸ್ಕೋಬೇಕು."

ಈ ಮಾತನ್ನ ಹೇಳಿದಾತ ಎರಡು ಮಕ್ಕಳ ತಂದೆ. ಏನ್ರೀ ಅನ್ಸುತ್ತೆ ನಿಮ್ಗೆ?

ಭೂಮಿತಾಯಿ ತನ್ನ ಮಕ್ಕಳಾದ ಪೈರಿಗೆ ಅಂತ ಎದೆ ಹಾಲನ್ನು ಕೊಡುವ ತರ ನೀರನ್ನ ಕೊಟ್ರೆ, ಇಲ್ಲಿನ ಜನ್ರು ಅದನ್ನೇ ಲಾರಿಗಟ್ಟಲೇ ಲೋಡ್ ಮಾಡಿ ಅಪಾರ್ಟ್‌ಮೆಂಟ್ ಗಳಿಗೆ ಸ್ನಾನ ಮಾಡೋಕೆ, ನೆಲ ಒರೆಸೋಕೆ, ಎದುರ್ಗೆ ಇರೋ ಲಾನಿನ ನೆಲಕ್ಕೆ ದುಡ್ಡಿನ ಆಸೆಗೆ ಮಾರ್ಕೊತಾರೆ. ಅಲ್ಲಿ  ತುಂಬು ಬಸುರಿಯಂತೆ ದಪ್ಪ ತೆನೆಯ ಹೊತ್ತ ಬೆಳೆಗಳು ಬಾಯಾರಿ ನೀರು ನೀರು ಅಂತ ಅಳುತ್ವೆ.



ಮನುಷ್ಯ ಯಾಕೆ ಇಷ್ಟೊಂದು ಹೃದಯ ಹೀನ ಆಗ್ತಾ ಇದಾನೆ?  ಕ್ರಿಶ್ಚಿಯನ್ ಸಂಪ್ರದಾಯ ಹೇಳುವ ಹಾಗೆ ಅದೆಷ್ಟೋ ಜನರ ಮಧ್ಯೆ ಯಾರಿಗೂ ತಿಳಿಯದ ಹಾಗೆ 'ಸೈತಾನ' ಸೃಷ್ಟಿ ಆಗ್ತಾನಂತೆ.. ಅವನಿಗೆ ಕರುಣೆ,ಸಂತೋಷ ಆನೊ ಯಾವುದೇ ಭಾವನೆಗಳೂ ಇರೋದಿಲ್ವಂತೆ. ಅವನಿಗೆ ಅಂತ ಭಾವನೆಗಳೊಂದಿಗೆ ಅತಿ ಹೀನ ವಾಗಿ ಆಡುವುದೇ ಒಂದು ಆಟವಂತೆ. ಅಂತದೊಂದು ಪೀಳಿಗೆ ನಮ್ಮೆಲ್ಲರ ಮಧ್ಯೆ ಸೃಷ್ಟಿ ಆಗ್ತಾ ಇದೆಯೇ?

ಮಾನವೀಯತೆ ಕಳ್ಕೊತ ಇದ್ದೇವೆಯೇ? ಸಂಭಂಧಕ್ಕೆ ಬೆಲೆ ಇಲ್ವೇ?

ಇದೇನಾ ಕಲಿಯುಗ? ಇದೇನಾ ೨೦೧೨??

ಇನ್ನೂ ಯೋಚಿಸ್ತಾ ಇದ್ದೇನೆ.. ನಿದ್ದೆ ಬರ್ತಾ ಇಲ್ಲ.. ಬರೆಯೋದಕ್ಕೆ ಮನಸ್ಸು ತುಂಬಿ ಬಂದಿದೆ ಆದ್ರೆ ಶಕ್ತಿ ಇಲ್ಲ..!

ದೆವ್ರೆ.. ನಮ್ಮೆಲ್ರಿಗೂ ಒಳ್ಳೇ ಬುದ್ಧಿ ಕೊಡಪ್ಪಾ..


Thursday, January 19, 2012

ಪ್ರೀತಿಯ ಸಲುವಾಗಿ..


ಅವರಿಬ್ಬರೂ ಎಲ್ಲಿಯವರೋ, ಯಾರ ಮಕ್ಕಳೋ.. ಭೇಟಿಯಾಗಿದ್ದು ಮಾತ್ರ ಕಾಕತಾಳಿಯ.. ಕಾಕತಾಳೀಯ ಅಂದ್ರೆ ಗೊತ್ತು ಆನೋದು ನನ್ನ ಭಾವನೆ. ಅದೊಂದು ಹಿಂದಿನ ಕಥೆ.. ಅದರ ಬಗ್ಗೆ ಬರೆಯೋಕೆ ಹೊರಟಿಲ್ಲ ನಾ ಈಗ. ಕಾಕತಾಳೀಯ ಅಂದ್ರೆ ತಿಳಿದೋ ತಿಳಿಯದೇ ಆಗುವುದು ಎಂದರ್ಥ. ಹಾಗೆ ಇಬ್ಬರು ಒಬ್ಬರನ್ನೊಬ್ಬರು ಭೇಟಿಯಾಗುತ್ತಾರೆ. ಒಬ್ಬರ ಬಗ್ಗೆ ಇನ್ನೊಬ್ಬರಿಗೆ ಗೊತ್ತಿಲ್ಲ, ಅವರವರ ಸಂಸಾರ,ಮೌಲ್ಯ,ಅಭಿರುಚಿ,ಆಸಕ್ತಿಗಳು ತಿಳಿದಿಲ್ಲ. ಅವರವ ನೋಟಕ್ಕೆ ಮಾತ್ರ ಇಬ್ಬರೂ ಕರಗಿ ಹೋಗಿರುತ್ತಾರೆ.. ಆದರೆ ಅದು ಪ್ರೀತಿಯಲ್ಲ.. ಅದೇ 'ಆಕರ್ಷಣೆ'. ಅದು ಹೇಗೆ ಆಕರ್ಷಣೆ ಅಂತ ನೀವು ಕೇಳಬಹುದು. ಅದರ ಉತ್ತರ ನಾ ಈಗಾಗಲೇ ಬರೆದಾಗಿದೆ. ಮತ್ತೊಮ್ಮೆ ಓದಿ ಅನ್ನೋಕೆ ಮಾತ್ರ ಸಾಧ್ಯ.

ಪ್ರೀತಿ ಅನ್ನುವುದು ಆಕರ್ಷಣೆ ಮುಂದೆ ಚಿಕ್ಕದಾಗಿಯೇ ಕಾಣುತ್ತದೆ, ಯಾಕೆಂದ್ರೆ ಅದು ಎರಡಕ್ಷರ ಜಾಸ್ತೀಯೇ. ಆದರೂ ಸಹ ಅದು ಉಳಿಯುವುದು ಕೇವಲ ಕೆಲವೇ ಸಮಯ. ಪ್ರೀತಿ ಹಾಗಲ್ಲ, ಅದು ವ್ಯಕ್ತಿಗತ,ಮನಕ್ಕೆ ಸ್ವಂತ. ನಾವು ವ್ಯಕ್ತಿಯ ಅಭಿರುಚಿ,ಆಸಕ್ತಿ,ನಡೆ,ನುಡಿ ನೋಡಿ ಇಷ್ಟ ಪಡುತ್ತೇವೆಯೇ ವಿನಃ ಅವರ ರೂಪಕ್ಕೆ ಅಸ್ತು ಬೆಲೆ ಕೊಡುವುದೇ ಇಲ್ಲ. ಅಕಸ್ಮಾತ್ ರೂಪ ಇದ್ದಾಗ ಅದು ಪ್ರೀತಿಗೆ ಹೆಚ್ಚಿನ ಒತ್ತು ಕೊಟ್ಟು ಪ್ರೀತಿಯನ್ನು ಎರಡು ಪಟ್ಟು ಜಾಸ್ತಿಯೇ ಮಾಡುತ್ತದೆ.



ಹೀಗೆ ಒಬ್ಬರನ್ನೊಬ್ಬರು ಭೇಟಿಯಾದವರು ತಮ್ಮ ತಮ್ಮ ರೂಪಗಳಿಗಷ್ಟೇ ಬೆಲೆ ಕೊಟ್ಟ ಕಾರಣ, ತಾವು ಒಬ್ಬರನ್ನೊಬ್ಬರು ಇಷ್ಟ ಪಡುತ್ತಿದ್ದೇವೆ ಎನ್ನುವ ತೀರ್ಮಾನಕ್ಕೆ ಬಂದವರು ಒಬ್ಬರಿಗೊಬ್ಬರು ಹೇಳಿಯೂ ಬಿಡುತ್ತಾರೆ. ಆದರೆ ಮುಂದಿನ ದಿನಗಳಲಿ ಹೆಚ್ಚಿನ ಒಡನಾಟದ ನಂತರ ಅವರಿಬ್ಬರಿಗೂ ತಿಳಿಯೋದು ವಾಸ್ತವಾಂಶ. ಒಬ್ಬರಿಗೊಬ್ಬರು ಕೇವಲ ಇಷ್ಟ ಪಟ್ಟರೆ ಹೊರತು, ಅವರು ವಿಚಾರಗಳು,ಅಭಿರುಚಿಗಳು ಯಾವುದೇ ರೀತಿಯಲ್ಲಿಯೂ ಸಹ ಹೋಲುತ್ತಿರುವುದಿಲ್ಲ. ಈಗ ಒಬ್ಬರನ್ನೊಬ್ಬರು ದೂರ ಮಾಡುವ ಹಾಗೂ ಇಲ್ಲ, ಒಬ್ಬರಿಗೊಬ್ಬರು ವಾಸ್ತವವನ್ನು ತಿಳಿಸುವ ಹಾಗೂ ಇಲ್ಲ. ಯಾರು ಮೊದಲು ತಿಳಿಸುತ್ತಾರೋ ಅವರಿಗೆ ಇನ್ನೊಬ್ಬರು 'ಫ್ಲರ್ಟ್' ಎಂಬ ಪಟ್ಟ ಕೊಡುವದಂತೂ ಗ್ಯಾರಂಟಿ.

ಹೀಗೆ ಅದೆಷ್ಟೋ ಪ್ರೀತಿ ಅಂದುಕೊಂಡ ಆಕರ್ಷಣೆಯ ಕಥೆ ಹೇಳ ಹೆಸರೇ ಇಲ್ಲದೇ, ಸೊಗಡಿಲ್ಲದೆ ಮಣ್ಣು ಸೇರುತ್ತದೆ. ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳದೇ ಜೀವನ ಪೂರ್ತಿ ನಾನೇ ಸರಿ, ನಾನೇ ಸರಿ ಎನ್ನುವ ಪ್ರತಿಷ್ಟೆಯ ತಾಳಿಕೊಳ್ಳುವ ಪ್ರಸಂಗವೂ ಎದುರಾಗುತ್ತದೆ. ಪ್ರತಿ ಕ್ಷನವೂ ಸೆಲ್ ಫೋನ್ ಹಿಡಿದು ಮೆಸೇಜ್ ಮಾಡುವ ಹುಡುಗ ಮೆಸೇಜ್ ಮಾಡದಿದ್ದಾಗ, ಅವನಿಗೆ ತಾನು ಇತ್ತೀಚೆಗೆ ತಾನು ಬೇಡವಾಗುತ್ತಿರುವೆ ಎಂಬ ಭಾವನೆ ಹುಡುಗಿಗೋ ಅಥವಾ ಅದೇ ರೀತಿ ಹುಡುಗಣಿಗೂ ಬರುವುದು ಸಹಜ. ಅದು ಕೇವಲ ಇಬ್ಬರ ನಡುವಿನ ಒಳ್ಳೆಯ ಸಂಬಂಧವೇ ಆದರೂ ಸಹ ಸುತ್ತಲಿನ ಜನರಿಗೆ ಅದು ವಿಪರೀತವಾಗಿ ಕಾಣುವುದು ಸಹ ತೀರಾ ಸಹಜ. ಅದೆಷ್ಟೋ ಬಾರಿ ಸುತ್ತಲಿನ ಪರಿಸರವೂ ಸಹ ಮಾನಸ ಕೆಡಿಸುತ್ತವೆ. ನಮಗೆ ಒಬ್ಬರ ಮೇಲೆ ಯಾವುದೇ ರೀತಿಯ ಆಪ್ಯಾಯತೆಯ ಭಾವನೆಗಳಿಲ್ಲದ್ಡಿದ್ದರೂ ಸಹ ಸ್ನೇಹಿತರು, 'ಮಗ, ಅವ್ಲಿಗೆ ನೀ ಇಷ್ಟ ಇಲ್ದೇ ಇಷ್ಟೆಲ್ಲಾ ಹೊತ್ತು ಮಾತಾಡ್ತಾಳಾ" ಅಂತ ಕೇಳಿದಾಗ, ಅವರ ಮಾತುಗಳು ನಮ್ಮ ಮನಕ್ಕೆ ಕಚಗುಳಿ ಇಡುವುದು ಸಹಜ. ಆದರೆ ಅಲ್ಲಿನ ವಾಸ್ತವತೆಯ ಅರಿವಿರುವ ಆ ಹುಡುಗನೋ ಹುಡುಗಿಯೋ ಅದರ ಬಗ್ಗೆ ಕೊಂಚ ಯೋಚಿಸಿದರೆ ಅವರ ಸಂಬಂಧವೂ ಪ್ರೀತಿಗೆ ಮಾರ್ಪಡದೇ ಚೆನ್ನಾಗಿಯೇ ಇರುತ್ತದೆ.

  ಪ್ರೀತಿ ಎಂದಾಕ್ಷಣ ಸುಂದರವಾದ ಹುಡುಗ, ಹುಡುಗಿ ಬೇಕು ಎಂದು ಅಂದುಕೊಳ್ಳುವುದು ಕೇವಲ ಕಲ್ಪನಾ ಲೋಕದ ಕಾದಂಬರಿಯ ಬರೆದಂತೆ. ಅವು ಕ್ಷಣಿಕ ಸುಖ ಕೊಡುತ್ತವೆಯೇ ಹೊರತು, ಅವು ವಾಸ್ತವತೆಗೆ ದೂರವೇ ಎಂದರೆ ತಪ್ಪೇ ಇಲ್ಲ.

ಪ್ರೀತಿಸುವ ಮುನ್ನ ವ್ಯಕ್ತಿಯ ವಿಚಾರಧಾರೆ,ಸೃಜನಶೀಲತೆ,ಭಾವ,ತರ್ಕ ಇವೆಲ್ಲವ ಅರ್ಥೈಸಿಕೊಂಡರೆ, ಪ್ರೀತಿಗೂ ಸಹ ನ್ಯಾಯ ಒದಗಿಸಿದಂತೆ. ಪ್ರೀತಿಗೋಸ್ಕರ ಹುಡುಕಾಡುವವ 'ದಡ್ಡ'. ಅದು ತನ್ನೇ ತಾನಾಗಿ ಆಗಬೇಕೆ ಹೊರತು, ಹುಡುಕಿ ಒತ್ತಾಯಪೂರ್ವಕವಾಗಿ ಪಡೆಯುವಂತಹುದಲ್ಲ.


 ಒಂದು ವೇಳೆ ಪಡೆದರೂ ಕೂಡ, ಅದು ತಥಾ ಮಗುವಿನ ಚಿಗುರುಬೆರಳಿನ ಸಂದಿನಿಂದ ಕಸಿವ ಆಟದ ಬೊಂಬೆಯಂತೆ.. ಮಗು ತಿಳಿದು ತಿಳಿಯದೆಯೋ ಜೋರಾಗಿ ಅಳುತ್ತದೆ.. ಹಾಗೆ ಪ್ರೀತಿಯೂ ನೊಂದುಕೊಳ್ಳುತ್ತದೆ.

ಇಷ್ಟೆಲ್ಲಾ ಬರೆದ ನನ್ನ ನೋಡಿ, ನಾ ಈಗ ಪ್ರೀತಿಯನ್ನ ಹುಡುಕುತ್ತಿರುವೆ ಅಂತ ನೀವು ಅರ್ಥೈಸಿಕೊಳ್ಳದಿದ್ದರೆ, ಅದೇ ನನ್ನ ಪುಣ್ಯದ ಪಾಲು.. ನೋಡಿ ಸ್ವಾಮಿ, "ನಾವ್ಯಾವತ್ತೂ ಸಿಂಗಲ್ಲು.. ಈಗ ಎಲ್ರೂ ಹಾಕ್ರಿ ವಿಶಲ್ಲು.." :)